ಬಾಬು ದಾಟಿದ ಹೊಳೆಯನ್ನೇ ಅವರ ಮಕ್ಕಳೂ ದಾಟುತ್ತಿದ್ದಾರೆ

kalladaka new
Published on

ವೇಣುವಿನೋದ್ ಕೆ.ಎಸ್ ಮಂಗಳೂರು

ಇವರು ಬಾಬು. ಮಳೆಗಾಲ ಶುರುವಾಗುತ್ತಲೇ ದ್ವೀಪವಾಗುವ ತಮ್ಮ ಊರಿಗೆ ಒಂದು ಸೇತುವೆಯಾಗಬೇಕು ಎಂದು ಶಾಲೆಗೆ ಹೋಗುತ್ತಿದ್ದಾಗಲೇ ಹೋರಾಟ ಪ್ರಾರಂಭಿಸಿದವರು.

ಈಗ ಬಾಬು ಅವರಿಗೆ 45 ವರ್ಷ. ಒಬ್ಬ ಮಗ 9ನೇ ತರಗತಿಯಾದರೆ, ಚಿಕ್ಕ ಪುತ್ರ 3ನೇ ತರಗತಿ. ಬಾಬು ಅವರು ಶಾಲೆಗೆ ಹೋಗಿ ಬರುವಾಗ ಹೇಗೆ ಒದ್ದೆಮುದ್ದೆಯಾಗಿರುತ್ತಿದ್ದರೋ, ಮಕ್ಕಳದೂ ಅದೇ ಪರಿಸ್ಥಿತಿ. ವರ್ಷಗಳು ಉರುಳಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಬುದ್ಧಿವಂತರ ಜಿಲ್ಲೆ ಎನ್ನಿಸಿಕೊಂಡಿರುವ ದಕ್ಷಿಣ ಕನ್ನಡದ ಸ್ಥಿತಿ ಇದು. ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿರುವ ಹಿರೇಬಂಡಾಡಿ ಗ್ರಾಮದ ಹೊಸಗದ್ದೆ ಅಗರಿಯ ಗ್ರಾಮಸ್ಥರ ದಶಕಗಳ ಕನಸಿನ ಕಥೆಯೂ ಹೌದು.

ಉಪ್ಪಿನಂಗಡಿಯಿಂದ 10 ಕಿ.ಮೀ.ದೂರದ ಪೆರಿಯಡ್ಕದ ಹತ್ತಿರ ಇರುವ ಊರು ಹೊಸಗದ್ದೆ. ಪೆರಿಯಡ್ಕದಿಂದ ಅಗರಿ ಪರಿಶಿಷ್ಟ ಕಾಲನಿಗೆ ತೆರಳುವ 2 ಕಿ.ಮೀ ಉದ್ದದ ರಸ್ತೆ ಕಲ್ಲಡ್ಕ ಎಂಬಲ್ಲಿ ನೇತ್ರಾವತಿ ಉಪನದಿ ಕೆಮ್ಮಾರ ಹೊಳೆ ದಾಟಬೇಕಾಗುತ್ತದೆ. ಈ ಹೊಳೆ ಸುಮಾರು 25ರಿಂದ 30 ಮೀಟರ್ ಅಗಲವಿದ್ದು ಮಳೆಗಾಲದಲ್ಲಿ ತುಂಬಿಹರಿಯುತ್ತದೆ. ಮಳೆಗಾಲ ಮುಗಿದು ನವೆಂಬರ್‌ವರೆಗೂ ಇದರಲ್ಲಿ ನೀರು ಹರಿಯುತ್ತದೆ. ಮೇಲ್ಭಾಗದಲ್ಲಿ ಕಟ್ಟ ಹಾಕಿದ ಬಳಿಕ ನೀರು ಹರಿಯುವುದು ನಿಲ್ಲುತ್ತದೆ.

1994ರಿಂದ ಹೋರಾಟ: ಬಾಬು ತಮ್ಮ ಊರಿನವರೊಂದಿಗೆ ಸೇತುವೆಗಾಗಿ ಹೋರಾಟ 2 ದಶಕಗಳ ಕಥೆ. ಹಿಂದೆ ತಮ್ಮ ಊರಿನಿಂದ ಶಾಲೆಗೆ ಹೋಗುವಾಗ ಇದೇ ಕೆಮ್ಮಾರ ಹೊಳೆಗೆ ಇಳಿದು ಸೊಂಟ ತನಕದ ನೀರಿನಲ್ಲಿ ಸಾಗುತ್ತಿದ್ದವರು, ಪಿಯುಸಿ ಓದನ್ನು ರಾಮಕುಂಜದ ಕಾಲೇಜಿನಲ್ಲಿ 1994ರಲ್ಲಿ ಪೂರ್ಣಗೊಳಿಸಿದ ಬಳಿಕ ಊರಿಗೆ ನ್ಯಾಯ ಕೊಡಿಸಲು ಮುಂದಾದರು.

ಅದಕ್ಕಾಗಿ ಅವರು ಊರಿನ ಜನಪ್ರತಿನಿಧಿಗಳಿಂದ ತೊಡಗಿ ಮುಖ್ಯಮಂತ್ರಿವರೆಗೂ ಮನವಿ ಸಲ್ಲಿಸಿದ್ದಾರೆ. ಅನೇಕ ಶಾಸಕರು, ಸಚಿವರಿಗೆ ಮನವಿ ಪ್ರತಿ ಸಂದಾಯವಾಗಿದೆ. ದ.ಕ ಜಿಲ್ಲಾ ಪಂಚಾಯಿತಿಯಿಂದಲೂ 1 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ಅದನ್ನು ಬೆಂಬತ್ತಿ ಹಲವು ಬಾರಿ ಬಾಬು ಬೆಂಗಳೂರು ವಿಧಾನಸೌಧಕ್ಕೆ ಹೋಗಿ ಬಂದಿದ್ದಾರೆ.

ಅದೇಕೋ ಏನೋ ಪ್ರಸ್ತಾಪ ಹಣಕಾಸು ಇಲಾಖೆಗೆ ಹೋಗುವುದೇ ಇಲ್ಲ, ಹಿಂದೆ ಶಕುಂತಳಾ ಶೆಟ್ಟಿ ಎಂಎಲ್‌ಎ ಆಗಿದ್ದಾಗ ನಬಾರ್ಡ್ ಯೋಜನೆಯಡಿ ಸೇತುವೆ ಮಾಡಿಸುವುದಾಗಿ ಪತ್ರ ಬರೆದು ಆ ಪ್ರಸ್ತಾಪಕ್ಕೂ ದೆಹಲಿಯಿಂದ ಅನುಮೋದನೆ ಸಿಗದೆ ಬಿದ್ದು ಹೋಯ್ತು ಎನ್ನುತ್ತಾರೆ ಬಾಬು.

ಈಗಿನ ಶಾಸಕ ಸಂಜೀವ ಮಠಂದೂರು ಅವರಿಗೂ ಎರಡು ಬಾರಿ ಮನವಿ ಕೊಟ್ಟಾಗಿದೆ, ಅವರಿಗೆ ಒಮ್ಮೆ 25 ಕೋಟಿ ರೂ. ಅನುದಾನ ಬಂದಿತ್ತು, ಆಗ ಈ ಕೆಲಸವನ್ನು ಮಾಡಿಕೊಡುವಂತೆ ಕೋರಿಕೊಂಡೆವು, ಆದರೂ ಅವರು ಪರಿಗಣಿಸಲಿಲ್ಲ, ಹೀಗಾದರೆ ಇನ್ನು ಗ್ರಾಪಂ ಚುನಾವಣೆಯನ್ನು ನಾವೆಲ್ಲ ಬಹಿಷ್ಕರಿಸುವ ಯೋಚನೆಯಲ್ಲಿದ್ದೇವೆ ಎಂದು ಖಡಾಖಂಡಿತವಾಗಿ ಹೇಳುತ್ತಾರೆ.

15 ಪರಿಶಿಷ್ಟ ಕುಟುಂಬ, 25 ಇತರ ಕುಟುಂಬ

ಅಗರಿ ಪರಿಶಿಷ್ಟ ಕಾಲನಿಯಲ್ಲಿ 15 ಪರಿಶಿಷ್ಟ ಜಾತಿಯ ಕುಟುಂಬಗಳು ವಾಸಿಸುತ್ತಿವೆ, 25 ಇತರ ಸಮುದಾಯದ ಕುಟುಂಬಗಳಿವೆ. ಇವರಿಗೆ ದಿನನಿತ್ಯದ ಕೆಲಸಕ್ಕಾಗಿ ಪೆರಿಯಡ್ಕಕ್ಕೆ ಬರುವ ಇದೇ 2 ಕಿ.ಮೀ ರಸ್ತೆಯೇ ಅನುಕೂಲ. ಅದಿಲ್ಲದಿದ್ದರೆ ಕಾಲ್ನಡಿಗೆಯಲ್ಲಿ ಸುಮಾರು 6 ಕಿ.ಮೀ ಸುತ್ತಿಬಳಸಿ ಪೆರಿಯಡ್ಕಕ್ಕೆ ಬರಬೇಕು. ಶಾಲೆ ಮಕ್ಕಳಿಗೆ, ಬೀಡಿ ಕಟ್ಟುವ ಮಹಿಳೆಯರಿಗೆ ಇಲ್ಲಿಯ ವಾಸ ಬಹಳ ಅನನುಕೂಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net