

ಕಾರವಾರ: ಅಂಕೋಲಾ ತಾಲೂಕಿನ ಮಂಜಗುಣಿ-ಕುಮಟಾ ತಾಲೂಕಿನ ಗಂಗಾವಳಿ ನಡುವಿನ ಸೇತುವೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಆ ಭಾಗದ ಜನಪ್ರತಿನಿಧಿಗಳು, ಪ್ರಮುಖರು, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ಬುಧವಾರ ಮನವಿ ಮಾಡಿದ್ದಾರೆ.
ಬೇಲೆಕೇರಿಯಿಂದ ತದಡಿ ಬಂದರಿನವರೆಗೆ ಸಂಪರ್ಕಿಸುವ ಮಾರ್ಗವನ್ನು ರಾಜ್ಯ ಹೆದ್ದಾರಿ-304 ಎಂದು ಘೋಷಿಸಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವಾಲಯವು ನವೆಂಬರ್ 6 ರಂದು ಆದೇಶ ಹೊರಡಿಸಿದೆ.
ಈ ಹೆದ್ದಾರಿಯು ಅಂಕೋಲಾ ಬೇಲೆಕೇರಿ ಗ್ರಾಮದ ಸರ್ವೇ ನಂಬರ್ 512 ಹಾಗೂ ಬಲಕ್ಕೆ 511 ಯಿಂದ ಪ್ರಾರಂಭವಾಗಿ ಅಗರ್‌ಕೊಪ್ಪ, ಅರ್ಗಾಕೇರಿ, ಕೊಗ್ರೆ, ಮಂಜಗೂಣಿ, ನಾಡು ಮಾಸ್ಕೇರಿ, ಮಾದನಚಿಟ್ಟೆ, ಗೋಕರ್ಣ, ನರಸಾಪುರ, ಕುಜನಿ, ಚೌಡಗೇರಿ ಕ್ರಾಸ್, ಸಾಣಿಕಟ್ಟಾ ಕ್ರಾಸ್ ತದಡಿ ಮುಖಾಂತರ ಸರ್ವೇ ನಂಬರ್ 1163/ಅ ಹಾಗೂ ಎಡಕ್ಕೆ ತದಡಿ ಬಂದರಿನಲ್ಲಿ ಕೊನೆಗೊಳ್ಳುತ್ತದೆ. ಅಂಕೋಲಾ ತಾಲೂಕಿನಲ್ಲಿ 13.58 ಕಿಮೀ ಸಂಚರಿಸಲಿದ್ದು, ಅಂಕೋಲಾ ಸೇರಿ ಒಟ್ಟು 22.79 ಕಿಮೀ ಹೆದ್ದಾರಿ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಂತಕುಮಾರ್ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಆದರೆ, ನಡುವೆ ಗಂಗಾವಳಿ ನದಿಗೆ ಮಂಜಗುಣಿ-ಗಂಗಾವಳಿ ನದಿಗೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಗಮದಿಂದ ಸುಮಾರು 32 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪ್ರಾರಂಭವಾಗಿ 7 ವರ್ಷ ಕಳೆದರೂ ಮುಕ್ತಾಯವಾಗಿಲ್ಲ. ಸೇತುವೆ ಕಾಮಗಾರಿ ಮುಗಿದು ಗಂಗಾವಳಿ ಭಾಗದಲ್ಲಿ ಪಿಚ್ಚಿಂಗ್ ಕೆಲಸ ಸಹ ಮುಗಿಸಿದೆ. ಆದರೆ, ಮಂಜಗುಣಿ ಭಾಗದಲ್ಲಿ ಸೇತುವೆಗೆ ಸಂಪರ್ಕ ಕಲ್ಪಿಸುವ ಪಿಚ್ಚಿಂಗ್ ಕಾಮಗಾರಿ ಮುಗಿದಿಲ್ಲ. ಅದಕ್ಕೆ ಇನ್ನು ಹೆಚ್ಚುವರಿ ಅನುದಾನ ಮಂಜೂರಾಗಬೇಕು ಎನ್ನಲಾಗುತ್ತಿದೆ. ಆದರೆ, ಈಗ ಸಣ್ಣ ಕಾಲು ದಾರಿ ಮಾಡಿ ಬೈಕ್ ಹೋಗಲು ಅವಕಾಶ ಮಾಡಿಕೊಡಲಾಗಿದ್ದು, ನಿತ್ಯವೂ ಅಪಘಾತ ಸಂಭವಿಸುತ್ತಿದೆ.
ಗೂಗಲ್ ಮ್ಯಾಪ್ ನಲ್ಲಿ ಅಂಕೋಲಾದಿಂದ ಗೋಕರ್ಣಕ್ಕೆ ಸಮೀಪದ ಮಾರ್ಗ ಎಂದು ಮಂಜಗುಣಿ ಮಾರ್ಗವನ್ನು ಸೂಚಿಸುತ್ತದೆ. ಅದನ್ನು ನಂಬಿ ನಿತ್ಯ ಇಲ್ಲಿಗೆ ಬರುವ ನೂರಾರು ಪ್ರವಾಸಿಗರು ತೊಂದರೆ ಅನುಭವಿಸುತ್ತಾರೆ. ಗೋಕರ್ಣಕ್ಕೆ ಲಕ್ಷಾಂತರ ಪ್ರವಾಸಿಗರು ಬರಲಿದ್ದು, ಸೇತುವೆ ಪಿಚ್ಚಿಂಗ್ ಹೆ ಕನಿಷ್ಠ ಮಣ್ಣು ತುಂಬಿ ಶಿವರಾತ್ರಿ ಒಳಗಾದರೂ ವಾಹನ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸೇತುವೆ ಕಾಮಗಾರಿ ಪೂರ್ಣಗೊಂಡರೆ ಗೋಕರ್ಣದಿಂದ ಅಂಕೋಲಾದ ದೂರ 20 ಕಿಮೀಯಿಂದ 8 ಕಿಮೀಗೆ ಇಳಿಕೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ 66 ರ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹಾಗೊಮ್ಮೆ ಶೀಘ್ರದಲ್ಲಿ ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡದೇ ಇದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಹೊಲಿಯಪ್ಪ ಗೌಡ, ಸದಸ್ಯ ರಾಘವೇಂದ್ರ ಗೌಡ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ,
ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ವಿ.ನಾಯಕ, ಪ್ರಮುಖರಾದ ನಾಗರಾಜ ತಾಂಡೇಲ, ರಾಜೇಶ ನಾಯಕ, ಚಂದ್ರಶೇಖರ ನಾಯ್ಕ ಇದ್ದರು.