

ಹೊಳೆನರಸೀಪುರ: ತಾಲೂಕಿನಲ್ಲಿ ಮಳೆ ಹೆಚ್ಚಾದ ಕಾರಣ ಹಳೆಕೋಟೆ ಹೋಬಳಿಯ ಬನಕುಪ್ಪೆಯಿಂದ ಮಿಸಗನಹಳ್ಳಿ ಹಾಗೂ ಬಿಟ್ಟಗೋಡನಹಳ್ಳಿಗೆ ಹೋಗುವ ರಸ್ತೆಯಲ್ಲಿನ ಸೇತುವೆ ಕುಸಿದು ಈ ಸುತ್ತಲ ಜಮೀನುಗಳಿಗೆ ಹೋಗಲು ಎತ್ತಿನಗಾಡಿ, ಟ್ರಾಕ್ಟರ್‌ಗಳ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ.
ಸಣ್ಣ ನೀರಾವರಿ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು, ಈ ಸೇತುವೆ ಕೆಳಗೆ ಅಳವಡಿಸಿದ್ದ ಪೈಪ್ ಮೇಲಿನ ಮಣ್ಣು ಕೊಚ್ಚಿಹೋಗಿದ್ದು, ಪೈಪ್ ಮೇಲೆ ಕಾಣುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಿ ಎತ್ತಿನ ಗಾಡಿಗಳು ಹಾಗೂ ಟ್ರಾಕ್ಟರ್‌ಗಳು ಸಂಚರಿಸಲು ಅನುವು ಮಾಡಿಕೊಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಬನಕುಪ್ಪೆ ರವಿ ಆಗ್ರಹಿಸಿದ್ದಾರೆ.
ಈ ಸೇತುವೆ ಕುಸಿದಿರುವುದರಿಂದ ಬನಕುಪ್ಪೆ ಜನರು ಬಿಟ್ಟಗೋಡನಹಳ್ಳಿ, ಚನ್ನರಾಯಪಟ್ಟಣ ಮುಖ್ಯರಸ್ತೆಗೆ ಹೋಗಲು ಹಾಗೂ ಬನಕುಪ್ಪೆಯ ವಿದ್ಯಾರ್ಥಿಗಳು ಶಾಲೆಗೆ ಹೋಗಲು ತೀವ್ರ ತೊಂದರೆ ಆಗಿದೆ ಎಂದು ವಿವರಿಸಿದ್ದಾರೆ