

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತಾಲೂಕಿನ ಚಾರ್ಮಾಡಿ ಗ್ರಾಮ ವ್ಯಾಪ್ತಿಯ ಕೊಳಂಬೆ ಎಂಬಲ್ಲಿ ಸೇತುವೆ ನಿರ್ಮಾಣವಾದರೆ ಸುಮಾರು 200ಕ್ಕಿಂತ ಅಧಿಕ ಕುಟುಂಬಗಳಿಗೆ ಮಳೆಗಾಲದಲ್ಲಿ ಸುತ್ತು ಬಳಸಿ ಸಂಚರಿಸುವ ಗೋಳು ತಪ್ಪುತ್ತದೆ.
ಕಕ್ಕಿಂಜೆ ಮತ್ತು ಚಾರ್ಮಾಡಿ ಪೇಟೆ ಮಧ್ಯೆ ಇರುವ ಬೀಟಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ 300 ಮೀ. ಒಳಗಡೆ ಕೊಳಂಬೆ ಪ್ರದೇಶವಿದೆ. ಕೊಳಂಬೆಯಲ್ಲಿ ಮೃತ್ಯುಂಜಯ ನದಿ ಹರಿಯುತ್ತಿದ್ದು, ಇಲ್ಲಿಂದ ನದಿಯ ಇನ್ನೊಂದು ಭಾಗದಲ್ಲಿ ಮಾರಂಗಾಯಿ, ಕತ್ತರಿಗುಡ್ಡೆ, ಮುಗುಳಿತಡ್ಕ ಮೊದಲಾದ ಪ್ರದೇಶಗಳಿವೆ. ಈ ಪ್ರದೇಶಗಳಿಗೆ ಬೇಸಿಗೆಯಲ್ಲಿ ನದಿಗೆ ತಾತ್ಕಾಲಿಕವಾಗಿ ಪೈಪ್‌ಗಳನ್ನು ಹಾಕಿ ಚರಲ್ ಸುರಿದು ನದಿ ಮೂಲಕ ಜನ ವಾಹನ ಓಡಾಟ ನಡೆಯುತ್ತದೆ. ಆದರೆ ಮಳೆಗಾಲ ಆರಂಭವಾಗಿ ನದಿಯಲ್ಲಿ ನೀರು ಹೆಚ್ಚಾದಾಗ ಈ ತಾತ್ಕಾಲಿಕ ಸಂಪರ್ಕ ಕೊನೆಗೊಳ್ಳುತ್ತದೆ. ಬಳಿಕ ಮಳೆಗಾಲದಲ್ಲಿ ಈ ಪ್ರದೇಶದ 50ಕ್ಕಿಂತ ಅಧಿಕ ವಿದ್ಯಾರ್ಥಿಗಳು, ಹೈನುಗಾರರು, ಉದ್ಯೋಗದಲ್ಲಿರುವ ಜನರು, ಫರ್ಲಾಣಿ ಮೂಲಕ ಸುಮಾರು 5 ಕಿ.ಮೀ. ಸುತ್ತು ಬಳಸಿ ರಸ್ತೆ ಮೂಲಕ ಸಂಚರಿಸಬೇಕು. ಇದು ಜೂನ್‌ನಿಂದ ನವೆಂಬರ್ ತನಕ ಅನಿವಾರ್ಯವಾಗುತ್ತದೆ. ನವೆಂಬರ್ ಬಳಿಕ ಇಲ್ಲಿ ಊರವರೇ ಒಟ್ಟಾಗಿ ತಾತ್ಕಾಲಿಕ ಸೇತುವೆ ನಿರ್ಮಿಸುತ್ತಾರೆ.
ಹಲವು ವರ್ಷಗಳ ಬೇಡಿಕೆ
ಕೊಳಂಬೆಯಲ್ಲಿ ಸೇತುವೆ ರಚನೆಯಾಗಬೇಕೆಂಬುದು ನದಿಯ ಇನ್ನೊಂದು ಭಾಗದಲ್ಲಿರುವ ಜನರ ಬಹುವರ್ಷದ ಬೇಡಿಕೆ. ಇಲ್ಲಿ ಸೇತುವೆ ನಿರ್ಮಾಣವಾದರೆ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ವಋತು ಸೇತುವೆ ಪ್ರದೇಶದಲ್ಲಿ ನಿರ್ಮಿಸಲು ಯಾವುದೇ ಸಮಸ್ಯೆ ಇಲ್ಲ. ಇಲ್ಲಿನ ಎರಡು ಕಡೆಯ ರಸ್ತೆ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಕೊಳಂಬೆಯಿಂದ ಒಂದು ಕಿ.ಮೀ. ಮೇಲ್ಭಾಗದಲ್ಲಿ ಅರಣಪಾದೆ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಇದೆ. ಇದು ನದಿಯ ಇನ್ನೊಂದು ಭಾಗದ ಜನರಿಗೆ ಕೊಂಚ ಹತ್ತಿರದ ಸಂಪರ್ಕವಾದರೂ ಇದು ಮಳೆಗಾಲದಲ್ಲಿ ಆಗಾಗ ಮುಳುಗಡೆಗೊಳ್ಳುತ್ತದೆ. ಈ ಕಿಂಡಿ ಅಣೆಕಟ್ಟಿನ ಮೇಲೆ ಸಾಕಷ್ಟು ಮರ ಮತ್ತು ತ್ಯಾಜ್ಯ ಸಂಗ್ರಹಗೊಳ್ಳುತ್ತದೆ. ಎರಡು ಬದಿಯ ಸಂಪರ್ಕ ರಸ್ತೆಯ ಭಾಗವು ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತದೆ. ಅಲ್ಲದೆ ಈ ಕಿರು ಸೇತುವೆಗೆ ತಡೆಬೇಲಿಯೂ ಇಲ್ಲ. ಇದರಿಂದ ಇದು ಮಳೆಗಾಲದಲ್ಲಿ ಹೆಚ್ಚಿನ ಪ್ರಯೋಜನ ನೀಡುತ್ತಿಲ್ಲ.
ಕಿಂಡಿ ಅಣೆಕಟ್ಟು ಇಲ್ಲಿ ಅಪಾಯಕಾರಿ
ಕೊಳಂಬೆಯಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸುವುದು ಅಪಾಯಕಾರಿ. ಏಕೆಂದರೆ ಇಲ್ಲಿನ ಪ್ರದೇಶ ತಗ್ಗಿನಲ್ಲಿದ್ದು, ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಗೊಂಡರೆ ಪ್ರದೇಶದಲ್ಲಿ ನುಗ್ಗುವ ಸಾಧ್ಯತೆ ಇರುವುದರಿಂದ ಇಲ್ಲಿ ಸೇತುವೆ ಕಟ್ಟುವುದೇ ಅನಿವಾರ್ಯ.
ಮಹಾ ಪ್ರವಾಹಕ್ಕೆ ತತ್ತರಿಸಿದ್ದ ಪ್ರದೇಶ
ಕೊಳಂಬೆ ಪ್ರದೇಶ 2019ರ ಮಹಾ ಪ್ರವಾಹಕ್ಕೆ ಸಂಪೂರ್ಣ ತತ್ತರಗೊಂಡು ರಾಜ್ಯವೇ ಗುರುತಿಸುವಂತಾಗಿತ್ತು. ಇಲ್ಲಿನ ಹಲವು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸುಮಾರು ನೂರು ಎಕರೆ ಪ್ರದೇಶದಲ್ಲಿ ಮರಳು ತುಂಬಿ ಕೃಷಿ ಭೂಮಿ ಬರಡು ಭೂಮಿಯಾಗಿತ್ತು. ಇಲ್ಲಿನ ಮನೆಗಳಿಗೆ ನುಗ್ಗಿದ ನೀರು ಇಲ್ಲಿನ ಜನರ ಸರ್ವಸ್ವವನ್ನು ಕೊಂಡೊಯ್ದಿತ್ತು. ಕೊಳಂಬೆ ಪ್ರವಾಹ ಸಮಯ ಹುಟ್ಟಿಕೊಂಡ ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಕೊಳಂಬೆಯ ಜನರಿಗೆ ಮರು ಜೀವ ನೀಡಿ 12 ಮನೆ ನಿರ್ಮಾಣ ಅಲ್ಲದೆ ಕೃಷಿ ಭೂಮಿಗಳ ಸಂಪೂರ್ಣ ಸ್ವಚ್ಛತೆ ನಡೆಸಿ ಅಡಕೆ ಸಸಿಗಳನ್ನು ನೆಟ್ಟು, ಗದ್ದೆಗಳಲ್ಲಿ ನಾಟಿ ಮಾಡಿ ಜನರಿಗೆ ಧೈರ್ಯ ತುಂಬಿತ್ತು. ಆದರೆ ಇಲ್ಲಿ ಸೇತುವೆ ನಿರ್ಮಾಣ ಇಂದಿಗೂ ಕನಸಾಗಿಯೇ ಉಳಿದಿದೆ. ಈ ಬಗ್ಗೆ ಸರಕಾರ ಸಂಬಂಧಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು ಗಮನಹರಿಸುವ ಅಗತ್ಯವಿದೆ.
ಮಳೆಗಾಲದಲ್ಲಿ ನಾವು ಸುತ್ತು ಬಳಸಿ ರಸ್ತೆಯನ್ನು ಅವಲಂಬಿಸಬೇಕಿದ್ದು, ಇದರಿಂದ ಐದಾರು ಕಿ.ಮೀ. ಹೆಚ್ಚು ದೂರವನ್ನು ಕ್ರಮಿಸಬೇಕಾಗಿದೆ. ಕೊಳಂಬೆಯಲ್ಲಿ ಸೇತುವೆ ನಿರ್ಮಾಣವಾದರೆ ಸಂಪರ್ಕ ಸುಲಭವಾಗುತ್ತದೆ. ಅಶೋಕ್ ಗೌಡ ಚಾರ್ಮಾಡಿ ಮಾರಂಗಾಯಿಯ ಸ್ಥಳೀಯರು ಇದೊಂದು ಹೆಚ್ಚಿನ ಮೊತ್ತದ ಕಾಮಗಾರಿಯಾಗಿದ್ದು, ಪಂಚಾಯಿತಿಯಿಂದ ಇಷ್ಟ್ಟೊಂದು ದೊಡ್ಡ ಮೊತ್ತದ ಅನುದಾನ ನೀಡಲು ಸಾಧ್ಯವಿಲ್ಲ. ಕೊಳಂಬೆಯಲ್ಲಿ ಸೇತುವೆ ನಿರ್ಮಾಣದ ಬಗ್ಗೆ ಜನಪ್ರತಿನಿಧಿಗಳಿಗೆ, ಇಲಾಖೆಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಶಾರದಾ ಚಾರ್ಮಾಡಿ ಗ್ರಾಪಂ ಅಧ್ಯಕ್ಷೆ