

ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯ ಆರ್ಟಿಒ ಕಚೇರಿಗಳು ಲಂಚಾವತಾರದ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಕಾಸು ಇಲ್ಲದೆ ಇಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ವಾಹನ ನೋಂದಣಿ, ಎಫ್ಸಿ, ಮಾಲೀಕ ಬದಲಾವಣೆ, ಪಮೀರ್ಟ್ ಮಾಡಿಸಲು ಏಜೆಂಟರಿಲ್ಲದೆ ಕೆಲಸ ಮಾಡಿಸಿಕೊಳ್ಳಲು ಸಾಧ್ಯವೇ ಇಲ್ಲದಂತಾಗಿದೆ. ಇನ್ನು ವಾಹನಗಳ ಮೇಲಿನ ದೂರಿಗೆ ದಂಡ ಕಟ್ಟಿ, ವಾಹನ ಬಿಡಿಸಿಕೊಳ್ಳಲು ಅಧಿಕಾರಿಗಳ ಕೈ ಬಿಸಿ ಮಾಡಲೇಬೇಕು ಎಂಬ ವಾತಾವರಣವಿದೆ.
ಸಾರ್ವಜನಿಕರು ಕೆಲಸಗಳಿಗಾಗಿ ನೇರವಾಗಿ ಕಚೇರಿಗೆ ಬಂದರೆ, ಅಧಿಕಾರಿಗಳು ಹಾಗೂ ಗುತ್ತಿಗೆ ನೌಕರರು ಗರಂ ಆಗುತ್ತಾರೆ. ಅಲ್ಲದೆ ಸಮಸ್ಯೆಗೂ ಸ್ಪಂದಿಸುವುದಿಲ್ಲ. ಏಜೆಂಟ್ಗಳ ಮುಖಾಂತರವೇ ಬರುವಂತೆ ಪರೋಕ್ಷವಾಗಿ ಪ್ರೇರೇಪಿಸುವ ದಂಧೆ ಜೋರಾಗಿಯೇ ನಡೆಯುತ್ತಿದೆ. ಏಕೆಂದರೆ ಏಜೆಂಟರ್ಗಳಿಂದ ಅಧಿಕಾರಿ, ಸಿಬ್ಬಂದಿಗೆ ಹಣ ಸಂದಾಯವಾಗುತ್ತಿದೆ ಎಂಬ ಮಾತಿದೆ.
ಆರ್ಟಿಒ ಮತ್ತು ಎಆರ್ಟಿಒ ಕಚೇರಿಗಳ ಸುತ್ತಮುತ್ತ ವಾಹನ ಚಾಲನಾ ತರಬೇತಿ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಲ್ಲಿ ತರಬೇತಿಗಿಂತ ಹಣದಾಹ ಮುಖ್ಯವಾಗಿದೆ. ಆರ್ಟಿಒ ಕಚೇರಿಯಲ್ಲಿ ಏಜೆಂಟ್ ಮತ್ತು ವಾಹನ ಚಾಲನಾ ತರಬೇತಿ ಶಾಲೆಗಳ ಕವರಿಂಗ್ ಫೈಲ್ ಅಥವಾ ಸೀಲ್ ಇದ್ದರೆ ಸಾಕು ಸಿಬ್ಬಂದಿ ಯಾವುದೇ ತಗಾದೆ ಇಲ್ಲದೆ ಕೆಲಸ ಮಾಡಿಕೊಡುತ್ತಾರೆ.
ಏಜೆಂಟರ್ ನಿಗದಿಪಡಿಸಿದ ಶುಲ್ಕವೇ ಅಂತಿಮ
ಎಲ್ಎಲ್ಆರ್ ಪಡೆಯಲು ಸರ್ಕಾರವು 150 ರೂ. ಶುಲ್ಕ ನಿಗದಿಪಡಿಸಿದರೆ, ಏಜೆಂಟರ್ಗಳು 1,000 ದಿಂದ 3,000 ರೂ.ವರೆಗೆ ವಸೂಲು ಮಾಡುತ್ತಿದ್ದಾರೆ. ಡಿಎಲ್ ಪಡೆಯಲು 200 ರೂ. ಇದ್ದರೆ, ಇಲ್ಲಿ 2,000 ದಿಂದ 5,500 ರೂ. ಶುಲ್ಕ ಪಾವತಿ ಮಾಡಬೇಕು. ಈ ಹಣ ಸರ್ಕಾರಿ ಖಜಾನೆಗೋ ಅಥವಾ ಅಧಿಕಾರಿಗಳ ಖಜಾನೆಗೋ ಅಥವಾ ಏಜೆಂಟ್ಗಳ ಖಜಾನೆಗೋ ಎಂಬುದು ತಿಳಿಯದಾಗಿದೆ.
ಏಜೆಂಟರಿಂದ ಅನುಮೋದನೆ
ಕೋಲಾರ ಆರ್ಟಿಒನಲ್ಲಿ ನೂರಕ್ಕೂ ಹೆಚ್ಚು ಏಜೆಂಟರಿದ್ದಾರೆ. ಕಚೇರಿಯ ಯಾವುದೇ ಸೇವೆಗಳಿಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಆದರೆ, ಅರ್ಜಿಗೆ ಅನುಮೋದನೆ ನೀಡುವುದು ಮಧ್ಯವರ್ತಿಗಳು. ಬಹುತೇಕರು ಆನ್ಲೈನ್ನಲ್ಲಿ ಅರ್ಜಿ ತುಂಬಲು ಮಧ್ಯವರ್ತಿಗಳನ್ನೆ ಅವಲಂಬಿಸಿದ್ದಾರೆ. ಹೀಗಾಗಿ ನಾಯಿಕೊಡೆಗಳಂತೆ ದಿನದಿಂದ ದಿನಕ್ಕೆ ಮಧ್ಯವರ್ತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಎಲ್ಎಲ್ಆರ್ಗೆ ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆರ್ಟಿಒ ಕಚೇರಿಗೆ ಹೋದರೆ ಸಿಬ್ಬಂದಿ ಸರ್ವರ್ ಸಮಸ್ಯೆ ನೆಪವೊಡ್ಡುತ್ತಾರೆ. ಆದರೆ, ಏಜೆಂಟರ ಕೈಗೆ ಹಣ ನೀಡಿದರೆ ಕ್ಷಣಾರ್ಧದಲ್ಲಿ ಅರ್ಜಿ ತುಂಬಿ ಪ್ರಿಂಟ್ ತೆಗೆಯುವ ಮಟ್ಟಕ್ಕೆ ಭ್ರಷ್ಟಾಚಾರ ಹೆಚ್ಚಾಗಿದೆ.
ಡಿಎಲ್ಗಾಗಿ ಅರ್ಜಿ ಸಲ್ಲಿಸಿದರೆ ಮೊದಲು ಎಲ್ಎಲ್ಆರ್ ಬರುತ್ತದೆ. ಸೌಲಭ್ಯ ಪಡೆದುಕೊಳ್ಳಲು ಅರ್ಜಿದಾರನ ಮೊಬೈಲ್ಗೆ ಸಂದೇಶ ಬಂದಿರುತ್ತದೆ. ಅಪ್ಪಿತಪ್ಪಿ ಸಂದೇಶವನ್ನು ಡಿಲಿಟ್ ಮಾಡಿದರೆ ದಂಡ ಅಂತ ಸಾವಿರಾರು ರೂ. ವಸೂಲು ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿ, ಸಿಬ್ಬಂದಿ ಕೊರತೆಯೇ ಬಂಡವಾಳ
ಆರ್ಟಿಒ ಕಚೇರಿಯ 49 ಹುದ್ದೆಗಳ ಪೈಕಿ 29 ಭರ್ತಿಯಾಗಿದ್ದು, 20 ಹುದ್ದೆಗಳು ಬಾಕಿ ಇವೆ. ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ದಲ್ಲಾಳಿಗರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಂದ ಹಣ ಪೀಕುತ್ತಿದ್ದಾರೆ ಎಂಬ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕೆಜಿಎಫ್ನಲ್ಲೂ ಹಾವಳಿ!
ಕೋಲಾರ ಜಿಲ್ಲಾ ಕೇಂದ್ರದಲ್ಲಿ ಆರ್ಟಿಒ ಕಚೇರಿಯ ಕಾರ್ಯಒತ್ತಡ ತಗ್ಗಿಸಲು ಕೆಜಿಎ್ನಲ್ಲೂ ಎಆರ್ಟಿಒ ಕಚೇರಿ ಆರಂಭಿಸಲಾಗಿದೆ. ಕೋಲಾರ ಆಟಿಒ ವ್ಯಾಪ್ತಿಗೆ ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಕೆಜಿಎ್ ಎಆರ್ಟಿಒ ವ್ಯಾಪ್ತಿಗೆ ಮಾಲೂರು, ಕೆಜಿಎ್, ಬಂಗಾರಪೇಟೆ ತಾಲೂಕುಗಳು ಒಳಪಡುತ್ತವೆ. ಈ ಎರಡೂ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ.
ಕರೆ ಸ್ವೀಕರಿಸದ ಅಧಿಕಾರಿ
ಕೋಲಾರ ಆರ್ಟಿಒ, ಕೆಜಿಎ್ ಎಆರ್ಟಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿರುವ ಆರೋಪ ಕುರಿತು ಪ್ರತಿಕ್ರಿಯೆ ಪಡೆಯಲು ಸಾರಿಗೆ ಪ್ರಾದೇಶಿಕ ಅಧಿಕಾರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸಲಿಲ್ಲ.
ಆರ್ಟಿಒ ಕಚೇರಿಗಳಲ್ಲಿ ದುಡ್ಡಿದ್ದರೆ ಮಾತ್ರ ಸಾರ್ವಜನಿಕರು ಕೆಲಸ ಆಗುತ್ತವೆ. ಸರ್ಕಾರಿ ಶುಲ್ಕ ಹೊರತು ಪಡಿಸಿ ಏಜೆಂಟರ್ ಅರ್ಜಿಗೆ ಇಂತಿಷ್ಟು ಅಂತ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ಈ ಅಕ್ರಮದಲ್ಲಿ ಅಧಿಕಾರಿಗಳಿಗೂ ಮಾಮೂಲು ಹೋಗುತ್ತದೆ, ಆದ್ದರಿಂದ ದಲ್ಲಾಳಿಗಳ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
- ಮೋಹನ್ರೆಡ್ಡಿ, ಕೋಲಾರ