ಆನ್‌ಲೈನ್ ಆ್ಯಪ್‌ನಿಂದ ಲಂಚ?

ನೆಲಮಂಗಲದ ಉಪ ನೋಂದಣಾಧಿಕಾರಿ ಕಚೇರಿಗೆ ಉಪ ಲೋಕಾಯುಕ್ತ ವೀರಪ್ಪ ಭೇಟಿ ನೀಡಿ, ಪರಿಶೀಲಿಸಿದರು.
04 Nela Ph 02 Lokayuktha vIsit
ನೆಲಮಂಗಲದ ಉಪ ನೋಂದಣಾಧಿಕಾರಿ ಕಚೇರಿಗೆ ಉಪ ಲೋಕಾಯುಕ್ತ ವೀರಪ್ಪ ಭೇಟಿ ನೀಡಿ, ಪರಿಶೀಲಿಸಿದರು.
Published on

ಅಧಿಕಾರಿಗಳಿಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ತರಾಟೆ ಕಚೇರಿ ಪರಿಶೀಲನೆ

ನೆಲಮಂಗಲ: ನಗರಸಭೆ ವ್ಯಾಪ್ತಿಯ ವಿವಿಧ ಸರ್ಕಾರಿ ಕಚೇರಿಗಳಿಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಸಾರ್ವಜನಿಕರಿಗೆ ವಿತರಣೆಯಾಗುವ ಸರ್ಕಾರದ ಸೌಲಭ್ಯ ಹಾಗೂ ಅರ್ಜಿ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿತು.
ಮೊದಲಿಗೆ ನಗರಸಭೆ ವ್ಯಾಪ್ತಿಯ ಬಿನ್ನಮಂಗಲ ಬಳಿಯ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಹಾಜರಾತಿ ಪುಸ್ತಕ ಸೇರಿ ಕೆಲ ದಾಖಲೆಗಳನ್ನು ಪರಿಶೀಲಿಸಿದರು. ಬಳಿಕ ನಗರಸಭೆ ಕಾರ್ಯಾಲಯ, ತಾಲೂಕು ಕಚೇರಿಗೆ ಭೇಟಿ ನೀಡಿ ಕೆಲ ದಾಖಲೆ ಪತ್ರಗಳೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಕಚೇರಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು.
ನಗರಸಭೆ ಸೇರಿ ತಹಸೀಲ್ದಾರ್ ಕಚೇರಿಯಲ್ಲಿ ಕಂದಾಯ ಹಾಗೂ ಭೂ ದಾಖಲೆಗೆ ಅಧಿಕಾರಿಗಳು ಜನಸಾಮಾನ್ಯರಿಂದ ಆನ್‌ಲೈನ್ ಆ್ಯಪ್ ಮೂಲಕ ಲಂಚ ಸ್ವೀಕಾರ ಮಾಡುತ್ತಿದ್ದಾರೆಂದು ಮಾಹಿತಿ ತಿಳಿದ ಲೋಕಾಯುಕ್ತ ಅಧಿಕಾರಿಗಳು, ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹಣಕಾಸಿನ ವಹಿವಾಟು ಪರಿಶೀಲಿಸಿದ್ದು, ಹಣ ವಹಿವಾಟು ಮಾಡಿದವರ ಹಾಗೂ ಕಾರಣಗಳ ಕುರಿತಾಗಿ ಮಾಹಿತಿ ಸಂಗ್ರಹಿಸಿದರು.
ರಾಜ್ಯ ಲೋಕಾಯುಕ್ತ ಉಪ ನಿಬಂಧಕ ಎನ್.ವಿ.ಅರವಿಂದ್, ರಾಜ್ಯ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಸಂಪತ್‌ಕುಮಾರ್, ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಪವನ್‌ನಜ್ಜೂರ್, ಡಿವೈಎಸ್‌ಪಿ ಗಿರೀಶ್‌ರೋಡ್ಕರ್, ಇನ್ಸ್ ಸ್ಪೆಕ್ಟರ್ ನಂದಕುಮಾರ್, ತಹಸೀಲ್ದಾರ್ ಅಮೃತ್‌ಆತ್ರೇಶ್, ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಶಿಧರ್ ಉಪಸ್ಥಿತರಿದರು.

ಹಾಸ್ಟೆಲ್‌ಗೆ ಭೇಟಿ
ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬಾಲಕರು ಹಾಗೂ ಬಾಲಕಿಯರ ಹಾಸ್ಟೆಲ್‌ನ ಡೈನಿಂಗ್‌ಹಾಲ್, ಅಡುಗೆಕೋಣೆ, ಸಂಗ್ರಹಣಾ ಕೊಠಡಿಯಲ್ಲಿನ ಧಾನ್ಯಗಳು ಸೇರಿ ಶೌಚಗೃಹಕ್ಕೂ ಲೋಕಾಯುಕ್ತ ಅಧಿಕಾರಿಗಳು ತೆರಳಿ ನಿರ್ವಹಣೆ ಪರಿಶೀಲನೆ ಮಾಡಿದರು. ಹಾಸ್ಟೆಲ್‌ನಲ್ಲಿ ವಾಸ್ತವ್ಯವಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ವಿತರಣೆ ಮಾಡಲಾಗುತ್ತಿರುವ ಸೌಲಭ್ಯಗಳ ಕುರಿತಾಗಿಯೂ ಸಿಬ್ಬಂದಿ, ವಿದ್ಯಾರ್ಥಿಗಳಿಂದ ಮಾಹಿತಿ ಕಲೆಹಾಕಿದರು. ವಿದ್ಯಾರ್ಥಿನಿಲಯದಲ್ಲಿ ಬಡವಿದ್ಯಾರ್ಥಿಗಳು ವಾಸ್ತವ್ಯವಿರುವುದರಿಂದ ಆಹಾರ ವಿತರಣೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಿಬ್ಬಂದಿಗೆ ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಮಾಡಿದ್ದ ಊಟ ಸೇವಿಸಿ ನ್ಯಾ.ಬಿ.ವೀರಪ್ಪ ಪರೀಕ್ಷೆ ಮಾಡಿದರು.

ಸ್ವತಃ ತಪಾಸಣೆ ಮಾಡಿಕೊಂಡ ಲೋಕಾಯುಕ್ತರು
ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು, ರೋಗಿಗಳ ಅಭಿಪ್ರಾಯ ಸಂಗ್ರಹಿಸಿದರು. ಬಿಪಿ, ಶುಗರ್ ತಪಾಸಣೆ ಮಾಡುವ ಯಂತ್ರ ಕೆಟ್ಟಿರುವುದನ್ನು ಗಮನಿಸಿ ಆಸ್ಪತ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆ ತಗೆದುಕೊಂಡ ಲೋಕಾಯುಕ್ತರು, ಹೊಸ ಯಂತ್ರ ತರಿಸಿಕೊಂಡು ಬಳಿಕ ಸ್ವತಃ ಅವರೇ ತಪಾಸಣೆ ಮಾಡಿಕೊಂಡರು. ತಾಲೂಕಿಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಭೇಟಿ ನೀಡಿರುವ ಮಾಹಿತಿ ತಿಳಿದುಕೊಂಡು ಎಚ್ಚೆತ್ತುಕೊಂಡು ತಾಲೂಕುಮಟ್ಟದ ಅಧಿಕಾರಿಗಳು ಕಚೇರಿಗಳನ್ನು ಸ್ವಚ್ಛಗೊಳಿಸಿ, ಶಿಸ್ತು ಕಾಪಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net