

ರಾಣೆಬೆನ್ನೂರ: ಮರಳಿನ ಗಾಡಿ ಬಿಡಲು 12 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದ ಇಲ್ಲಿಯ ತಹಸೀಲ್ದಾರ್ ಹಾಗೂ ಆತನ ಚಾಲಕ ಲೋಕಾಯುಕ್ತ ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಬಿದ್ದ ಘಟನೆ ಶುಕ್ರವಾರ ಸಂಭವಿಸಿದೆ.
ಇಲ್ಲಿಯ ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಹಾಗೂ ಆತನ ಚಾಲಕ ಮಾಲತೇಶ ಹಾವನೂರ ಲೋಕಾಯುಕ್ತ ಬಲೆಗೆ ಬಿದ್ದವರು.
ಇವರು ಎರಡು ದಿನದ ಹಿಂದೆ ಮಂಜುನಾಥ ಓಲೇಕಾರ ಎಂಬುವನ ಮರಳಿನ ಗಾಡಿ ಹಿಡಿದಿದ್ದರು. ಗಾಡಿ ಬಿಡಲು 12 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಶುಕ್ರವಾರ ನಗರದ ವೀರಭದ್ರೇಶ್ವರ ನಗರದಲ್ಲಿರುವ ತಹಸೀಲ್ದಾರ್ ಮನೆಗೆ ಮಂಜುನಾಥನನ್ನು ಕರೆಯಿಸಿಕೊಂಡು ಹಣ ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇಬ್ಬರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ವಿ.ವಿ. ಕೌಲಾಪುರೆ, ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಬಿ.ಪಿ., ಅಧಿಕಾರಿ ಎಚ್. ಆಂಜನೇಯ, ಮಂಜುನಾಥ ಪಂಡಿತ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ದಾಳಿಯಲ್ಲಿದ್ದರು.