ಜಿಲ್ಲೆಯಲ್ಲಿ ದೇಸಿ ಬೀಜ ತಳಿ ಸಂರಕ್ಷಣೆ

desi
Published on

 ಬೆಂಗಳೂರು ಗ್ರಾಮಾಂತರ: ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಸಾಂಪ್ರದಾಯಿಕ ಬೆಳೆಗಳನ್ನು ಸಂರಕ್ಷಿಸಿ ಅವುಗಳನ್ನು ಮತ್ತೆ ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ಜಿಲ್ಲಾ ಕೃಷಿ ಇಲಾಖೆ ದೇಸಿ ಬೀಜ ತಳಿ ಸಂರಕ್ಷಣೆ ಅಭಿಯಾನ ಕೈಗೆತ್ತಿಕೊಂಡಿದೆ.

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸರ್ವೇ ಕಾರ್ಯ ಆರಂಭಿಸಿದ್ದು, ರೈತರು ಸಾಂಪ್ರದಾಯಿಕ ದೇಸಿ ಬೀಜ ತಳಿಗಳ ಮಾಹಿತಿ ನೀಡುವಂತೆ ಇಲಾಖೆ ಮನವಿ ಮಾಡಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದು, ಹಲವು ತಳಿಗಳ ರಾಗಿ ಬೆಳೆಯಲಾಗುತ್ತಿದೆ, ಇವುಗಳಲ್ಲಿ ಕೆಲವು ತಳಿಗಳಿಗೆ ಪ್ರಾಚೀನ ಸಂಪ್ರದಾಯವಿದ್ದು ವಿಶೇಷ ತಳಿಗಳಾಗಿವೆ. ಇವುಗಳು ಇತ್ತೀಚಿನ ದಿನಗಳಲ್ಲಿ ಬೆಳೆಯುವುದು ಕ್ಷೀಣಿಸುತ್ತಿದೆ. ಕೆಲವೊಂದು ಕಡೆಗಳಲ್ಲಿ ಮಾತ್ರ ಕಂಡುಬರುತ್ತಿದ್ದು ಇಂಥ ವಿಶೇಷ ತಳಿಯ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಬೀಜಬ್ಯಾಂಕ್‌ನಲ್ಲಿ ಸಂರಕ್ಷಿಸಿ ಮತ್ತಷ್ಟು ಅಭಿವೃದ್ಧಿಪಡಿಸಿ ಮತ್ತೆ ಅವುಗಳನ್ನು ರೈತರಿಗೆ ವಿತರಿಸುವುದು ಹಾಗೂ ಆ ತಳಿಯ ಮಹತ್ವದ ಬಗ್ಗೆ ಅರಿವು ಮೂಡಿಸಿ ದೇಸಿ ಬೆಳೆಗಳನ್ನು ಹೆಚ್ಚು ಬೆಳೆಯುವಂತೆ ಪ್ರೋತ್ಸಾಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ದೇಸಿ ತಳಿ ಎಂದರೇನು? ಆಯಾ ಪ್ರದೇಶದಲ್ಲಿ ರೈತರು ತಲೆಮಾರುಗಳಿಂದ ಸಾಂಪ್ರದಾಯಿಕ ಬೆಳೆಗಳು, ಸ್ಥಳೀಯ ಕೃಷಿ ಪದ್ದತಿ ಮೂಲಕ ಆಯಾ ಪ್ರದೇಶ ವಾತಾವರಣಕ್ಕೆ ಹೊಂದಿಕೊಳ್ಳುವಂತ ವಿಶೇಷ ಗುಣಲಕ್ಷಣದ ಬೆಳೆ ಬೆಳೆಯುವ ಬೀಜಗಳಿಗೆ ದೇಸಿ ತಳಿ ಎನ್ನಲಾಗುತ್ತದೆ. ಇವು ಇನ್ನಿತರ ಬೆಳೆಗಳಿಗಿಂತ ವಿಭಿನ್ನವಾಗಿದ್ದು, ಔಷಧಿಯುಕ್ತ ಗುಣವುಳ್ಳದ್ದಾಗಿರುತ್ತದೆ, ಇತ್ತೀಚಿನ ವರ್ಷಗಳಲ್ಲಿ ಇಂಥ ತಳಿಗಳು ಕಣ್ಮರೆಯಾಗುತ್ತಿದ್ದು, ಇವುಗಳ ಸಮೀಕ್ಷೆ ನಡೆಸಿ ಅವುಗಳನ್ನು ಸಂರಕ್ಷಿಸುವುದು ಈ ಯೋಜನೆಯ ಪ್ರಮುಖ ಕಾರ್ಯವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಗಿ, ಜೋಳ, ತೊಗರಿ, ಅಲಸಂದೆ, ನವಣೆ, ಸಾಮೆ, ಊದಲು, ಬರಗು, ಗೋಧಿ, ಮೆಣಸಿನಕಾಯಿ ಸೇರಿ ವಿವಿಧ ಬಗೆಯ ಕಾಳುಗಳು ಈ ಸಾಲಿಗೆ ಸೇರಿದ್ದು ಇವುಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ.

ಸಾವಯವ ಕೃಷಿ ಪದ್ಧತಿ: ಕೃಷಿ ಇಲಾಖೆ ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಪ್ರೋತ್ಸಾಹಿಸುತ್ತಿದ್ದು, ಈ ನಿಟ್ಟಿನಲ್ಲಿ ಈ ಸಾಂಪ್ರದಾಯಿಕ ಬೆಳೆಗಳು ಪ್ರಮುಖ ಪಾತ್ರ ವಹಿಸಲಿವೆ, ಈ ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕ ಬಳಕೆ ಇರುವುದಿಲ್ಲ, ಗೊಬ್ಬರ ಬಳಕೆ ಕನಿಷ್ಟ ಪ್ರಮಾಣದಲ್ಲಿರುತ್ತದೆ ಜತೆಗೆ ಕೊಟ್ಟಿಗೆ ಗೊಬ್ಬರದಂತ ಸಾಂಪ್ರದಾಯಿಕ ವ್ಯವಸ್ಥೆ ಇರಲಿದೆ, ಇದರಿಂದ ಇಂಥ ಬೆಳೆಗಳು ವಿಶಿಷ್ಟ ಗುಣಮಟ್ಟ ಹೊಂದಿರುತ್ತವೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ರಾಗಿ ಪ್ರದಾನವಾಗಿ ಬೆಳೆದರೂ ನಂತರದಲ್ಲಿ ಮುಸುಕಿನ ಜೋಳವೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿವೆ, ಅದರಲ್ಲೂ ವಿಶೇಷ ತಳಿಯ ರಾಗಿ ಕಂಡುಬರುವುದರಿಂದ ತಲೆಮಾರುಗಳಿಂದ ಬೆಳೆದುಕೊಂಡು ಬರುತ್ತಿರುವ ರಾಗಿ ತಳಿಯ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ.

ಸಂಯುಕ್ತ ರಸಗೊಬ್ಬರಕ್ಕೆ ಆದ್ಯತೆ: ಗ್ರಾಮಾಂತರ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಡಿಎಪಿ ಗೊಬ್ಬರವನ್ನು ಹೆಚ್ಚಾಗಿ ಬಳಸಲಾಗುತ್ತಿದೆ, ಇದರಲ್ಲಿ ಭೂಮಿಯ ಲವತ್ತತೆಗೆ ಬೇಕಾಗುವ ಪ್ರಮುಖ ಅಂಶದ ಕೊರತೆ ಇದೆ, ರೋಗ ನಿರೋಧಕ ಶಕ್ತಿ ಇಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆರಂಭಿಸಿದೆ, ಕರಪತ್ರ ವಿತರಣೆ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ರೈತಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಕಾರಿಗಳು ತಿಳಿಸಿದ್ದಾರೆ.

--

70 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ:

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ಸುಮಾರು 62 ಸಾವಿರ ಹೆಕ್ಟೇರ್‌ನಲ್ಲಿ ರಾಗಿ, 4 ಹೆಕ್ಟೇರ್ ಮುಸುಕಿನ ಜೋಳ ಇರಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ತೊಗರಿ ಬಿತ್ತನೆ ಕಾರ್ಯ ಆರಂಭವಾಗಿದೆ, ಭೂಮಿ ಹದ ಮಾಡುವಲ್ಲಿ ರೈತಾಪಿ ಜನರು ಮಗ್ನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---

ಜಿಲ್ಲೆಯಲ್ಲಿನ ಸಾಂಪ್ರದಾಯಿಕ ಬೀಜ ತಳಿಗಳನ್ನು ಸಂರಕ್ಷಿಸಿ ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೀಜಬ್ಯಾಂಕ್ ಸ್ಥಾಪನೆಯಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರೈತರು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಬೆಳೆಯುತ್ತಿರುವ ಬೆಳಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡುತ್ತೇವೆ, ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.

ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net