

ಮಡಿಕೇರಿ: ಜಮ್ಮಾಭೂಮಿ ಎನ್ನುವುದು ಯಾರೂ ಬಳುವಳಿಯಾಗಿ ನೀಡಿದ ಭೂಮಿಯಲ್ಲ, ಇದು ಕೊಡವರ ಉಸಿರು ಮಾತ್ರವಲ್ಲ ಜನ್ಮಸಿದ್ಧ ಹಕ್ಕಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕೊಡವ ಎಂ.ಎ.ವಿಭಾಗದ ಉಪನ್ಯಾಸಕ ಬಾಚರಣಿಯಂಡ ಅಪ್ಪಣ್ಣ ತಿಳಿಸಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಕೊಡವ ಎಂ.ಎ.ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಮ್ಮಾಜಾಗ ಮತ್ತು ತೋಕ್ ಹಕ್ಕು ಕುರಿತು ವಿಚಾರ ಮಂಡನೆ ಮಾಡಿ ಮಾತನಾಡಿದ ಅವರು, ಕೊಡವ ಎಂಬ ಶಬ್ದದಲ್ಲಿ ೧೯ ಕೊಡವ ಭಾಷಿಕ ಮೂಲನಿವಾಸಿಗಳು ಅಡಗಿದ್ದಾರೆ. ಜಮ್ಮಾ ಎನ್ನುವುದು ಜನ್ಮ ಭೂಮಿ. ಇದು ಯಾವ ರಾಜರು ಅಥವಾ ಬ್ರಿಟಿಷರು ಬಳುವಳಿಯಾಗಿ ನೀಡಿದ ಭೂಮಿಯಲ್ಲ. ಹಿಂದಿನ ಕಾಲದಲ್ಲಿ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಯಿತು. ಈ ಭೂಮಿ ಕೊಡಗಿವರ ಉಸಿರು, ಕೊಡವರ ಜನ್ಮಸಿದ್ದ ಹಕ್ಕಾಗಿದೆ ಎಂದರು.
ಜಮ್ಮಾ ಇಲ್ಲದಿದ್ದರೆ ೧೯ ಮೂಲನಿವಾಸಿಗಳಿಗೆ ನೆಲೆ ಇಲ್ಲದಂತಾಗುತ್ತದೆ. ಜಮ್ಮಾಮಣ್ಣು ಕೊಡವರನ್ನು ಸಾಕಿ, ಬೆಳೆಸುತ್ತಿದೆ. ಇದನ್ನು ಎಂದಿಗೂ ಮಾರುವಂತಿಲ್ಲ ಎಂದು ಪ್ರತಿಪಾದಿಸಿದರು. ಕೊಡವರು ಪೂರ್ವಜರ ಕಾಲದಿಂದಲೂ ಆಯುಧಗಳನ್ನು ಪೂಜಿಸುತ್ತಾರೆ. ಕತ್ತಿಗಳು, ಬಿಲ್ಲು ಬಾಣಗಳು, ಈಗ ಬಂದೂಕು ಪೂಜಿಸಲ್ಪಡುತ್ತಿದೆ. ಕೋವಿ ಕೊಡವರ ಮನೆಯ ಪೂಜಾರ್ಹ ಸಾಧನವಾಗಿದ್ದು, ಕೊಡವ ಜನಾಂಗದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು.
ಸಾಹಿತಿ ಹಾಗೂ ಎಂ.ಎ.ಕೊಡವ ವಿಭಾಗದ ಉಪನ್ಯಾಸಕಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪಾಲಕರು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಭರದಲ್ಲಿ ಮಾತೃ ಭಾಷೆಯನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಕ್ಕಳಲ್ಲಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಬೇಕು. ಕಾರ್ಯಪ್ಪ ಕಾಲೇಜ್‌ನಲ್ಲಿ ಎಂ.ಎ ಕೊಡವ ಪದವಿ ಈಗಾಗಲೇ ಆರಂಭವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪುಸ್ತಕ ರಚಿಸಿ ಬಿಡುಗಡೆ ಮಾಡುವ ಮೂಲಕ ಯುವಕ, ಯುವತಿಯರಿಗೆ ಮಾದರಿಯಾಗಿದ್ದಾರೆ. ಕೊಡವ ಎಂ.ಎ ತರಗತಿಯ ಅಧ್ಯಯನವನ್ನು ಸದುಪಯೋಗಪಡಿಸಿಕೊಂಡು ಕೊಡವ ಸಾಹಿತ್ಯ, ಭಾಷೆ ಹಾಗೂ ಬರಹವನ್ನು ಬೆಳೆಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಮೇಜರ್ ರಾಘವ, ಬುಡಕಟ್ಟು ಸಮುದಾಯದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಭಾಷೆ ಬಹಳ ಮುಖ್ಯ. ಕಾಲೇಜ್‌ನಲ್ಲಿ ಎಂ.ಎ ಕೊಡವ ಪ್ರಾರಂಭವಾದ ನಂತರ ಗಮನಾರ್ಹ ಬದಲಾವಣೆಯಾಗುತ್ತಿದೆ. ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಉತ್ಸಾಹದಿಂದ ಪುಸ್ತಕಗಳನ್ನು ಅನಾವರಣಗೊಳಿಸಲಾಗುತ್ತಿದೆ ಎಂದರು.
ಎಂ.ಎ ಕೊಡವ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ ಮಾತನಾಡಿ, ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಕೊಡಗಿನ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡವ ಎಂ.ಎ ವಿದ್ಯಾರ್ಥಿ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೇವಲ ಲಾಭಕ್ಕಾಗಿ ಶಿಕ್ಷಣ ಪಡೆಯದೆ ಅದನ್ನು ಜೀವನದ ಭಾಗವಾಗಿ ಸ್ವೀಕರಿಸಬೇಕು. ಭಾಷೆ, ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವವರು ಸದಾ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ ಎಂದ ಅವರು, ಸಾಮಾಜಿಕ ಜಾಲತಾಣವನ್ನು ಮತ್ತೊಬ್ಬರ ತೇಜೋವಧೆಗೆ ಬಳಕೆ ಮಾಡದೆ ಉತ್ತಮ ಕಾರ್ಯಕ್ಕೆ ಬಳಕೆ ಮಾಡುವಂತೆ ಕರೆ ನೀಡಿದರು.
ಎಂ.ಎ.ಕೊಡವ ವಿಭಾಗದ ಉಪನ್ಯಾಸಕಿ ಅಣ್ಣಳಪಂಡ ಧರ್ಮಶೀಲ ಅಜಿತ್, ಕೊಡವ ಎಂ.ಎ ವಿದ್ಯಾರ್ಥಿನಿಯರಾದ ಬೊಳ್ಳಾರ್‌ಪಂಡ ಎನ್.ಹೇಮಾವತಿ, ಐಚಂಡ ರಶ್ಮಿ ಮೇದಪ್ಪ ಪ್ರಾರ್ಥಿಸಿ, ಕರವಂಡ ಸೀಮಾ ಗಣಪತಿ ಸ್ವಾಗತಿಸಿ, ಬೊಳ್ಳಜಿರ ಯಮುನಾ ಅಯ್ಯಪ್ಪ ನಿರೂಪಿಸಿ, ಪುತ್ತರಿರ ವನಿತ ಮುತ್ತಪ್ಪ ವಂದಿಸಿದರು.
ಗಣ್ಯರಿಂದ ೪ ಪುಸ್ತಕಗಳ ಬಿಡುಗಡೆ
ಲೇಖಕಿ ಐಚಂಡ ರಶ್ಮಿ ಮೇದಪ್ಪ ಬರೆದಿರುವ ಕೊಡವ ಮಕ್ಕಡ ಕೂಟದ ೬೭ನೇ ಪುಸ್ತಕ ಚೆರ್ ಕತೆ ಮತ್ತು ಚೆರ್ ನಾಟಕ, ಲೇಖಕಿ ಕರವಂಡ ಸೀಮಾ ಗಣಪತಿ ಬರೆದಿರುವ ಕೊಡವ ಮಕ್ಕಡ ಕೂಟದ ೬೮ನೇ ಪುಸ್ತಕ ಕವನ ಪೊಟ್ಟಿ, ಕೊಡವ ಎಂ.ಎ ವಿದ್ಯಾರ್ಥಿಗಳಾದ ಬೊಪ್ಪಂಡ ಶ್ಯಾಮ್ ಪೂಣಚ್ಚ, ಲೆ.ಕರ್ನಲ್ ಬಿ.ಎಂ.ಪಾರ್ವತಿ, ಐಚಂಡ ರಶ್ಮಿ ಮೇದಪ್ಪ, ಪುತ್ತರಿರ ವನಿತ ಮುತ್ತಪ್ಪ, ಆಪಾಡಂಡ ಎನ್.ಹೇಮಾವತಿ, ಬೊಳ್ಳಜಿರ ಅಯ್ಯಪ್ಪ, ಚೌಂಡಿರ ಶಿಲ್ಪ ಪೊನ್ನಪ್ಪ, ಬೊಳ್ಳಜಿರ ಯಮುನ ಅಯ್ಯಪ್ಪ ಕರವಂಡ ಸೀಮಾ ಗಣಪತಿ ಬರೆದ ಕೊಡವ ಮಕ್ಕಡ ಕೂಟದ ೬೯ನೇ ಪುಸ್ತಕ ದೇವತೆಯಡ ಮತ್ತು ಕೇಳಿಪೋನಯಿಂಗಡ ಪಾಟ್ ಕಥಾ ರೂಪ ಹಾಗೂ ೭೦ನೇ ಪುಸ್ತಕ ಜಾನಪದ ಕತೆ ಜೊಪ್ಪೆ ನಾಲ್ಕು ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು.