

ಮಡಿಕೇರಿ: ಬಾಣೆಮೊಟ್ಟೆ ಮತ್ತು ರಾಘವೇಂದ್ರ ದೇವಸ್ಥಾನ ಅಂಗನವಾಡಿ ಕೇಂದ್ರಗಳಲ್ಲಿ ಸ್ತನ್ಯಪಾನ ಮತ್ತು ಉಪಶಮನ ಆರೈಕೆ ಬಗ್ಗೆ ಅರಿವು ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಸದಸ್ಯ ಸತೀಶ್ ಮಾತನಾಡಿ, ಸ್ತನ್ಯಪಾನ ಮತ್ತು ಉಪಶಮನ ಆರೈಕೆ ಕಾರ್ಯಕ್ರಮ ಉತ್ತಮವಾದ ಸಂದೇಶವನ್ನು ಒಳಗೊಂಡಿದೆ. ಜನರು ಇತರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು, ಸ್ತನ್ಯಪಾನ ಸಪ್ತಾಹದ ಮಹತ್ವದ ಬಗ್ಗೆ ಮತ್ತು ಗರ್ಭಿಣಿ ಬಾಣಂತಿ ಮಗುವಿನ ಆರೈಕೆ ಪೌಷ್ಟಿಕ ಆಹಾರದ ಬಗ್ಗೆ ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಪ್ರಮುಖರಾದ ಶೋಭಾ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆಯು ಸರ್ಕಾರ ಮತ್ತು ಸಮುದಾಯದ ಸಹಕಾರದಿಂದ ಉಪಶಮನ ಆರೈಕೆ ಕಾರ್ಯಕ್ರಮವನ್ನು ಈಗಾಗಲೇ ಮೈಸೂರು, ಸರಗೂರು, ಹಾಸನ, ಬೆಂಗಳೂರು ಮತ್ತು ಧಾರವಾಡದಲ್ಲಿ ಅನುಷ್ಠಾನಗೊಳಿಸಿದೆ. ಈ ಕಾರ್ಯಕ್ರಮದ ವತಿಯಿಂದ ಕ್ಯಾನ್ಸರ್ ಮತ್ತು ಇನ್ನಿತರೇ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಮನೆಗೆ ಪ್ರತಿ ದಿನ ವೈದ್ಯರು, ನರ್ಸ್ಸ್, ಆಪ್ತಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರ ತಂಡ ಭೇಟಿ ನೀಡುತ್ತಿದ್ದು, ರೋಗಿಗಳಿಗೆ ವೈದ್ಯಕೀಯ ಸೇವೆ, ಆಪ್ತಸಮಾಲೋಚನೆ, ಭಾವನಾತ್ಮಕ ಬೆಂಬಲ ಸೇವೆ, ಸಾಮಾಜಿಕ ಸವಲತ್ತು ಸೇವೆಗಳು, ಸಾಧನ ಸಲಕರಣೆ ವಿತರಣೆ ಮತ್ತು ಶಿಫಾರಸ್ಸು ಹಾಗೂ ಸಂಪರ್ಕ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಅಮುದ, ಗೀತಾ ಸಹಾಯಕಿಯರಾದ ರೋಹಿಣಿ, ಅನಿತಾ, ಆಶಾ ಕಾರ್ಯಕರ್ತೆ ಸಾಯಿದಾಬಾನು, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪಲ್ಲವಿ ಹಾಜರಿದ್ದರು.