

ಮಡಿಕೇರಿ : ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಮೂರು ತಿಂಗಳಿನಿಂದ ಒಂದು ವರ್ಷದವರೆಗೆ ಸ್ತನ್ಯಪಾನ್ಯ ಅತಿ ಮುಖ್ಯವಾದದ್ದು ಎಂದು ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ವಾತ್ಸಲ್ಯ ಶಿಶು ಪಾಲನ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದರು.
ಶಿಶುಕೇಂದ್ರ ಸ್ಥಾಪನೆಯಾದದ್ದು ಶ್ಲಾಘನೀಯ. ಇನ್ನು ಹೆಚ್ಚು ಕೇಂದ್ರಗಳು ಸ್ಥಾಪನೆಯಾಗಲಿ ಎಂದ ಅವರು, ಜನರಿಗೆ ಕೆಲಸದ ನಡುವೆ ಮಕ್ಕಳನ್ನು ನೋಡಿಕೊಂಡು ಕಾರ್ಯ ನಿರ್ವಹಿಸುವುದು ಕಷ್ಟಕರವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿಶು ಪಾಲನ ಕೇಂದ್ರ ಸ್ಥಾಪನೆಯಾಗಿದ್ದು ಇಲ್ಲಿನ ಜನಸಾಮಾನ್ಯರಿಗೆ ಮತ್ತು ಅಧಿಕಾರವರ್ಗದವರಿಗೂ ಅನುಕೂಲವಾಗಲಿದೆ ಎಂದರು.
ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಮೂರು ತಿಂಗಳಿನಿಂದ ಒಂದು ವರ್ಷದವರೆಗೆ ಸ್ತನ್ಯಪಾನ್ಯ ಅತಿ ಮುಖ್ಯವಾದದ್ದು. ಇದು ಮಕ್ಕಳನ್ನು ಬಿಟ್ಟು ದೂರದಲ್ಲಿ ಕೆಲಸ ನಿರ್ವಹಿಸುವವರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯವಾಗಲಿದೆ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಶಿಶುಪಾಲನ ಕೇಂದ್ರದ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಶಿಶು ಪಾಲನ ಕೇಂದ್ರದಲ್ಲಿ ಮಕ್ಕಳ ಚಲನ ವಲನಗಳನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯಲಿದೆ ಎಂದರು.
ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ರೆಹನಾ ಸುಲ್ತಾನ್ ಮಾತನಾಡಿ, ರಾಜ್ಯದಲ್ಲಿ ಪ್ರಥಮವಾಗಿ ಆರಂಭವಾದ ವಾತ್ಸಲ್ಯ ಕೇಂದ್ರ ಇದಾಗಿದೆ. ಜಿಲ್ಲೆಯಲ್ಲಿ ಒಟ್ಟು ಎರಡು ಮತ್ತು ತಾಲೂಕುಗಳಲ್ಲಿ ಎರಡು ಶಿಶು ಪಾಲನಾ ಕೇಂದ್ರಗಳು ಸ್ಥಾಪನೆಯಾಗಲಿದೆ ಎಂದರು.
ವಾತ್ಸಲ್ಯ ಶಿಶು ಪಾಲನ ಕೇಂದ್ರದ ಉದ್ಘಾಟನೆಯನ್ನು ಮಡಿಕೇರಿ ಶಾಸಕರು ನೆವರೇರಿಸಿದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಅನಿಲ್ ಬಿ.ಬಗಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎನ್. ಮಂಜುನಾಥ್, ಶಿಶು ಕಲ್ಯಾಣಾಧಿಕಾರಿ ಪೊನ್ನಚ್ಚ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಮಲಾ ಇತರರು ಉಪಸ್ಥಿತರಿದ್ದರು.