

ಮಡಿಕೇರಿ: ತಾಯಿಯ ಎದೆಹಾಲು ಮಗುವಿನ ಆರೋಗ್ಯ ಮತ್ತು ಮೆದುಳಿನ ಬೆಳವಣಿಗೆ ಸಹಕಾರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾದಂಡ ಸವಿತಾ ಕೀರ್ತನ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಕಾಂತರೂ ಮುರ್ನಾಡು ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಎಂ.ಬಾಡಗ -೧ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಮತ್ತು ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
೨೦೨೫ರಲ್ಲಿ ಸ್ತನ್ಯಪಾನಕ್ಕೆ ಆದ್ಯತೆ ನೀಡಿ ಸುಸ್ಥಿರ ಬೆಂಬಲ ವ್ಯವಸ್ಥೆಗಳನ್ನು ರಚಿಸಿ ಎಂದು ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದು ಪ್ರತಿಯೊಬ್ಬ ತಾಯಂದಿರಿಗೆ ಹಾಲುಣಿಸಲು ಬೆಂಬಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಈ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆ೧ ರಿಂದ ೭ರವರೆಗೆ ಸ್ತನ್ಯಾಪಾನ ಸಪ್ತಾಹವನ್ನು ಎಲ್ಲಾ ಅಂಗನವಾಡಿಗಳಲ್ಲಿ ಆಚರಿಸಿ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.
ಮಕ್ಕಳು ಹುಟ್ಟಿದ ಅರ್ಧ ಗಂಟೆಯೊಳಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಎದೆ ಹಾಲನ್ನು ತಪ್ಪದೇ ತಾಯಂದಿರು ಮಕ್ಕಳಿಗೆ ನೀಡಬೇಕು. ಮಗುವಿಗೆ ಆರು ತಿಂಗಳವರೆಗೆ ಎದೆಹಾಲನ್ನೇ ನೀಡಬೇಕು. ಆರು ತಿಂಗಳ ನಂತರ ಎರಡು ವರ್ಷದವರೆಗೆ ಮೇಲು ಆಹಾರದೊಂದಿಗೆ ಎದೆ ಹಾಲನ್ನು ಮುಂದುವರಿಸಬೇಕು. ಇದರಿಂದ ಮಗುವಿನ ಆರೋಗ್ಯ ಮತ್ತು ಮೆದುಳಿನ ಬೆಳವಣಿಗೆ ಉತ್ತಮ ರೀತಿಯಲ್ಲಿ ಸಹಕಾರಿಯಾಗುತ್ತದೆ. ಜತೆಗೆ ತಾಯಿಯ ಆರೋಗ್ಯ ಮತ್ತು ಸೌಂದರ್ಯ ಕೂಡ ಹೆಚ್ಚುವುದು ಎಂದು ತಿಳಿಸಿದರು.
ಕಾಂತರೂ ಮುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವ ಕುರಿತು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಸೌಲಭ್ಯಗಳ ಸದುಪಯೋಗ ಪಡೆಯಲು ತಂದೆ ತಾಯಂದಿರು ಪ್ರೋತ್ಸಾಹಿಸಿ ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಕೈಜೋಡಿಸಬೇಕು. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷೆ ರೇಖಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗ್ರಾಮ ಪಂಚಾಯಿತಿ ಮತ್ತು ಸಮುದಾಯದಿಂದ ಮತ್ತಷ್ಟು ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲಾ ಫಲಾನುಭವಿಗಳಿಗೆ ಇಲಾಖೆಯಿಂದ ದೊರೆಯುವ ಎಲ್ಲಾ ಯೋಜನೆಗಳ ಸೌಲಭ್ಯವನ್ನು ಸೂಕ್ತ ಸಮಯದಲ್ಲಿ ದೊರಕಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಅಭಿವೃದ್ಧಿಗೆ ಉತ್ತಮ ಸಲಹೆ, ಸಹಕಾರ, ಉತ್ತಮ ಮಾರ್ಗದರ್ಶನ ನೀಡುತ್ತಿರುವ ಹಿನ್ನೆಲೆ ಬಾಲವಿಕಾಸ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷೆ ರೇಖಾ, ಸದಸ್ಯರಾದ ನಿಂಗಪ್ಪ, ಮೀನಾಕ್ಷಿ ದೇವಯ್ಯ, ಸೌಮ್ಯ ಕಾವೇರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಕಲಾವಿದ ದರ್ಶನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರ ಜಿಲ್ಲಾಧ್ಯಕ್ಷೆ ಸುಮಿತ್ರ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಪವಿತ್ರ, ಅಂಗನವಾಡಿ ಕಾರ್ಯಕರ್ತೆಯರಾದ ಚೈತ್ರ, ಪ್ರಮೀಳಾ, ಭವ್ಯ, ಕುಸುಮ, ಗೀತಾ, ಆಶಾ ಕಾರ್ಯಕರ್ತೆ ಚಂದ್ರಿಕಾ, ಲಕ್ಷ್ಮಿ, ಶ್ರೀಶಕ್ತಿ ಗುಂಪಿನ ಸದಸ್ಯರು ಸೇರಿದಂತೆ ಭಗವತಿ ಶ್ರೀ ಶಕ್ತಿ, ವಿನಾಯಕ ಶ್ರೀ ಶಕ್ತಿ ಗುಂಪಿನ ಸದಸ್ಯರು, ತಾಯಂದಿರು, ಬಾಲವಿಕಾಸ ಸಮಿತಿಯ ಪದಾಧಕಾರಿಗಳು ಹಾಜರಿದ್ದರು.