ಮಗುವಿಗೆ ಕಡ್ಡಾಯವಾಗಿ ತಾಯಿ ಎದೆ ಹಾಲು ಉಣಿಸಿ

IMG-20240817-WA0113
Published on

ಹೊಳೆನರಸೀಪುರ : ತಾಯಿಯ ಎದೆಹಾಲು ಅಮೃತ ಸಮಾನವಾದದ್ದು, ಎದೆ ಹಾಲು ಉಣಿಸುವುದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹೆಚ್ಚಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಸುರೇಶ್ ಹೇಳಿದರು.


ತಾಲೂಕಿನ ಓಡನಹಳ್ಳಿ ವಲಯದ ಓಡನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಯಂದಿರು ಕಡ್ಡಾಯವಾಗಿ ಎರಡು ವರ್ಷಗಳ ತನಕ ಎದೆಹಾಲು ಕುಡಿಸಬೇಕು. ಇದರಿಂದ ಮಕ್ಕಳ ದೈಹಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.


ಸೋಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರಾಕೇಶ್ ಮಾತನಾಡಿ, ಮಗು ಜನಿಸಿದ ಅರ್ಧ ತಾಸಿನ ಒಳಗೆ ತಾಯಿಯಂದಿರು ಎದೆಹಾಲು ಉಣಿಸಬೇಕು. ಮೊದಲು ಕುಡಿಸುವ ಎದೆ ಹಾಲಿನಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ಮಗು ಯಾವುದೇ ಮಾರಣಾತಿಕ ರೋಗಕ್ಕೆ ತುತ್ತಾಗುವುದಿಲ್ಲ ಮತ್ತು ಅಪೌಷ್ಟಿಕತೆಯಿಂದ ಬಳಲುವುದಿಲ್ಲ ಎಂದರು.


ಎದೆ ಹಾಲು ಉಣಿಸುವುದರಿಂದ ತಾಯಂದಿರು ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್ ಅಂತಹ ಮಾರಣಾಂತಿಕ ರೋಗಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಪಂಕಜಾ, ಅಂಗನವಾಡಿ ಸಹಾಯಕಿಯರಾದ ಹೇಮಲತಾ, ರೇಷ್ಮಾ ವಲಯ ಮಟ್ಟದ 36 ಅಂಗನವಾಡಿ ಸಹಾಯಕಿಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net