

ಬಾಳೆಹೊನ್ನೂರು: ತಾಯಿಯ ಹಾಲು ಮಗುವಿಗೆ ಸರ್ವಶ್ರೇಷ್ಠವಾಗಿದ್ದು, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್ ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಇನ್ನರ್‌ವ್ಹೀಲ್ ಕ್ಲಬ್ ಗುರುವಾರ ಆಯೋಜಿಸಿದ್ದ ಸ್ತನ್ಯಪಾನ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯಿಯ ಹಾಲಿನಲ್ಲಿರುವ ಪ್ರೋಟೀನ್ ಮಗುವಿನ ಮಿದುಳು ಬೆಳವಣಿಗೆಗೆ ಸಹಕಾರಿಯಾಗಿದೆ. ಇದರಲ್ಲಿರುವ ಕೊಬ್ಬಿನ ಅಂಶದಿಂದ ಮಗುವಿನ ನರಮಂಡಲ ವ್ಯವಸ್ಥೆ ಅಭಿವೃದ್ಧಿಯಾಗುತ್ತದೆ. ತಾಯಿಯ ಹಾಲನ್ನು ಸಾಕಷ್ಟು ಕುಡಿದ ಮಗುವಿನ ಬುದ್ಧಿಮಟ್ಟ ಹೆಚ್ಚಾಗಿರುತ್ತದೆ. ಮಗುವಿಗೆ ಹಾಲು ಉಣಿಸುವುದರಿಂದ ತಾಯಿಗೂ ಸಾಕಷ್ಟು ಲಾಭಗಳಿವೆ ಎಂದು ಹೇಳಿದರು.
ಮಕ್ಕಳ ತಜ್ಞ ಡಾ. ಎಂ.ಬಿ.ರಮೇಶ್ ಮಾತನಾಡಿ, ಸ್ತನ್ಯಪಾನದಿಂದ ಮಗುವಿನ ಮತ್ತು ತಾಯಿಯ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ತಾಯಿಯ ಆತ್ಮ ವಿಶ್ವಾಸದಿಂದಲೇ ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ. ಮಗುವಿಗೆ ಹೆಚ್ಚಿನ ಸಮಯ ಹಾಲು ನೀಡುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದರು.
ಆಸ್ಪತ್ರೆಯ ಡಿ ಗ್ರೂಪ್ ನೌಕರರನ್ನು ಸನ್ಮಾನಿಸಲಾಯಿತು. ಇನ್ನರ್‌ವ್ಹೀಲ್ ಅಧ್ಯಕ್ಷೆ ಜಾಹ್ನವಿ ಜಯರಾಮ್, ವೈಶಾಲಿ ಕುಡ್ವ, ಸವಿತಾ, ಪಲ್ಲವಿ, ಮೇನಕಾ, ಕಾಂಚನಾ, ವಿದ್ಯಾ ಪೈ, ಸವಿತಾ ಮೂರ್ತಿ ಇತರರಿದ್ದರು.