

ಸರಗೂರು: ಮಗು ಜನಿಸಿದ ಮೊದಲ 3 ದಿನ ಬರುವ ಗಿಣ್ಣು ಹಾಲು ಹೆಚ್ಚು ಕೊಡಬಾರದೆಂಬ ಮೂಢನಂಬಿಕೆಯನ್ನು ತಾಯಂದಿರು ತ್ಯಜಿಸಬೇಕು. ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಲು ಈ ಹಾಲು ಪೂರಕ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಸಲಹೆ ನೀಡಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದದಲ್ಲಿ ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಗುವಿನ 6 ತಿಂಗಳು ಎದೆ ಹಾಲನ್ನೇ ನೀಡಬೇಕು. ಹಾಲುಣಿಸುವ ಅವಧಿಯಲ್ಲಿ ತಾಯಂದಿರಿಗೆ ಕುಟುಂಬದವರ ಸಹಕಾರ ಅತಿ ಮುಖ್ಯ. ತಾಯಿಗೆ ಪೌಷ್ಟಿಕ ಆಹಾರ ನೀಡಿ, ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳ ತಜ್ಞೆ ಡಾ.ಜಯಮಾಲಾ ಮಾತನಾಡಿ, ಮಗು ಜನಿಸಿದ ಅರ್ಧ ಗಂಟೆಯಿಂದ 1 ಗಂಟೆಯೊಳಗೆ ಮೊದಲ ಬಾರಿಗೆ ಹಾಲುಣಿಸಬೇಕು. ಮೊದಲ 3 ದಿನ ಬರುವ ಗೀಬಿನ ಹಾಲನ್ನು ಮಗುವಿಗೆ ನೀಡಲೇಬೇಕು. ಮೊದಲು ಬರುವ ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ಅದು ತಡೆಗಟ್ಟುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವೀರೇಶ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪಾರ್ಥ ಸಾರಥಿ, ದಂತ ವೈದ್ಯೆ ಡಾ. ಪೂರ್ಣಿಮಾ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ ರವಿರಾಜ್, ಶರಣಪ್ಪ, ರಮಣಿ, ಅರ್ಚನಾ, ಅಸೀಮಾ ಸುಲ್ತಾನ್ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಜಗದೀಶ್, ಮಹದೇವ್, ಹರೀಶ್, ಬಸಮ್ಮ, ಶಾಂತಿ, ಭಾಗ್ಯಾ ಲಕ್ಷ್ಮೀ, ಮಾನಸಾ, ಮಂಜುಳಾ, ಶ್ವೇತಾ, ಸಹನಾ, ಎನ್.ವೈ.ಶ್ವೇತಾ, ಆಶಾ ಕಾರ್ಯಕರ್ತೆಯರು ಹಾಗೂ ತಾಯಂದಿರು, ಸಾರ್ವಜನಿಕರು ಇದ್ದರು.