

ಗಂಗಾವತಿ: ಜನಿಸಿದ ಮಗುವಿಗೆ 6 ತಿಂಗಳವರಿಗೂ ತಾಯಿಹಾಲು ನೀಡುವುದೇ ಸೂಕ್ತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ವೈದ್ಯಾಧಿಕಾರಿ ಡಾ. ಎಚ್.ಟಿ.ಲಿಂಗರಾಜ್ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ಮಗುವಿನ ಬೆಳವಣಿಗೆಯಲ್ಲಿ ತಾಯಿಹಾಲು ಮಹತ್ವದ ಪಾತ್ರವಹಿಸುತ್ತದೆ. ತಾಯಿ ಆರೋಗ್ಯ ಹಿತದೃಷ್ಟಿಯಿಂದಲೂ ಸೂಕ್ತವಾಗಿದ್ದು, ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ತಾಯಿಗೆ ಕರೊನಾ ಇದ್ದರೂ ಮಗುವಿಗೆ ತಾಯಿಹಾಲು ನೀಡಬಹುದಾ?
ತಾಯಿ ಹಾಲಿನ ಮಹತ್ವ, ಪೌಷ್ಟಿಕತೆ ಮತ್ತು ಮಗು ಬೆಳೆಸುವ ಕುರಿತು ಮಾಹಿತಿ ನೀಡಲಾಯಿತು. ಸಪ್ತಾಹ ನಿಮಿತ್ತ ವಿವಿಧೆಡೆ ಹಮ್ಮಿಕೊಳ್ಳುವ ಕಾರ್ಯಕ್ರಮ ಕುರಿತು ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ಎರಡು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಲು ಸಲಹೆ ನೀಡಿದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ಪ್ರಾದೇಶಿಕ ಆರೋಗ್ಯಾಧಿಕಾರಿ ಡಾ.ವಿಜಯಪ್ರಕಾಶ, ತಾಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಚಕೋಟಿ ಇತರರಿದ್ದರು.
ರೋಟರಿ ಕ್ಲಬ್: ನಗರದ ಶ್ರೀಗಂಗಾಧರೇಶ್ವರ ದೇವಾಲಯ ಆವರಣದಲ್ಲಿ ರೋಟರಿ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಕ್ಲಬ್ ಜಿಲ್ಲಾ ಕಾರ್ಯದರ್ಶಿ ಟಿ.ಆಂಜನೇಯ ಚಾಲನೆ ನೀಡಿದರು. ತಾಯಿ ಮತ್ತು ಮಗುವಿನ ಅನನ್ಯ ಸಂಬಂಧ ವೃದ್ಧಿಗೆ ತಾಯಿಹಾಲು ಸಹಕಾರಿ ಎಂದರು.
ಕಾರ್ಯಕ್ರಮದ ಕುರಿತು ತಾಲೂಕು ಅಧ್ಯಕ್ಷ ಶಿವಕುಮಾರ ಮಾತನಾಡಿ, ಜನರಲ್ಲಿ ಜಾಗೃತಿಮೂಡಿಸಲು ಉಪನ್ಯಾಸ, ಬೀದಿನಾಟಕ ಇತರ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ಬಿಬಿಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶಿಸಲಾಯಿತು.
ನಗರಸಭೆ ಸದಸ್ಯೆ ಈರಮ್ಮ ಸಿದ್ದರಾಮಪ್ಪಗೌಡ, ಮಾಜಿ ಸದಸ್ಯೆ ಪದ್ಮಾವತಿ ಆಂಜನೇಯ, ಕಾಲೇಜಿನ ಪ್ರಾಚಾರ್ಯ ಜಾರ್ಜ್ ಹೊನ್ನಳ್ಳಿ, ಕ್ಲಬ್ ಪದಾಧಿಕಾರಿಗಳಾದ ಉಗಮರಾಜ್ ಬಂಬ್, ದಿಲೀಪ್‌ಕುಮಾರ, ದೊಡ್ಡಯ್ಯ ಜನಾದ್ರಿ, ಸುರೇಶ ಬಂಬ್, ವಿಜಯಕುಮಾರ ಗಡ್ಡಿ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ, ಕವಿತಾ, ರಾಧಾ ಇತರರಿದ್ದರು.