

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಚರಿಸಲಾಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸವಿತಾ ಮಾತನಾಡಿ, ಮಗು ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲು ಕುಡಿಸುವುದು ಮುಖ್ಯ. ಇದು ಗರ್ಭದಿಂದ ಹೊರಬಂದ ಮಗುವಿಗೆ ಅಮೃತಕ್ಕೆ ಸಮಾನವಾಗಿರುವುದರಿಂದ ಮಗುವಿನಿಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನವಜಾತ ಶಿಶುವಿಗೆ ಜೇನುತುಪ್ಪ, ಹಾಲು ನೀರು ಸಕ್ಕರೆ ನೀರು ಇತ್ಯಾದಿಗಳನ್ನು ಕೊಡಬಾರದು. ಇದನ್ನು ನೀಡುವುದರಿಂದ ಮಗು ಸೋಂಕಿಗೆ ತುತ್ತಾಗುವ ಹಾಗೂ ಉಸಿರುಗಟ್ಟಿ ಮರಣಹೊಂದುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಸುದರ್ಶನ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಬಾಣಂತಿಯರು ಗರ್ಭಿಣಿಯರು ಇದ್ದರು.