ತಾಯಿ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

MILK
Published on

ನರಗುಂದ: ತಾಯಿ ಹಾಲು ಅಮೃತಕ್ಕೆ ಸಮಾನ. ಮಗು ಜನಿಸಿದ ಒಂದು ತಾಸಿನ ಒಳಗಾಗಿ ಕುಡಿಸಬೇಕು. ಮೂರು ದಿನಗಳವರೆಗೆ ಬರುವ ಹಳದಿ ಹಾಲನ್ನು ತಪ್ಪದೆ ಕುಡಿಸಬೇಕು. ಇದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ವಿವಿಧ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಹೇಳಿದರು.

ಪಟ್ಟಣದ ದಂಡಾಪೂರ ಕಿಡಕಿ ಬಸವೇಶ್ವರ ದೇವಸ್ಥಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳು ಜನಿಸಿದಾಗ ಅವರ ಬಾಯಿಯಲ್ಲಿ ಜೇನುತುಪ್ಪ, ಸಕ್ಕರೆ ನೀರು ಕುಡಿಸುವುದನ್ನು ಮಾಡಬಾರದು. ಹೀಗೆ ಮಾಡುವುದರಿಂದ ಮಕ್ಕಳ ಬಾಯಿಯಲ್ಲಿ ಗುಳ್ಳೆಗಳಾಗುತ್ತವೆ. ಆರು ತಿಂಗಳವರೆಗೆ ಮಕ್ಕಳಿಗೆ ತಪ್ಪದೆ ತಾಯಿ ಹಾಲು ಕುಡಿಸಬೇಕು. ಈ ಹಾಲಿನಿಂದ ಮಗುವಿಗೆ ಬೇಕಾಗುವ ಎಲ್ಲ ಪೋಷಕಾಂಶಗಳು ಲಭಿಸುತ್ತದೆ. ಆರು ತಿಂಗಳ ನಂತರ ತಾಯಿ ಹಾಲಿನ ಜತೆಗೆ ಪೂರಕ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಕೊಡಬೇಕು’ ಎಂದರು.

ಅಂಗನವಾಡಿ ಕಾರ್ಯಕರ್ತೆ ಪಿ.ಐ. ಹುಯಿಲಗೋಳ, ಎಸ್.ಬಿ. ಹುನ್ನೂರ, ಭಾರತಿ ಮಾರಿಹಾಳ, ಎ.ಎಂ. ಕಾಡದೇವರಮಠ, ಬಿ.ಬಿ. ಗುಡಿಕಾರ, ಕೆ.ಬಿ. ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net