ವಂಶವಾಹಿ ರಾಜಕಾರಣಕ್ಕೆ ಬ್ರೇಕ್ ಹಾಕಿ: ರವಿಕೃಷ್ಣಾರೆಡ್ಡಿ

krs party programme
ಶಿವಮೊಗ್ಗ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿದರು. ಲಿಂಗೇಗೌಡ, ದೀಪಕ್, ಮಂಜುನಾಥ್, ಪ್ರಭು, ಮೂರ್ತಿ, ನಂದಾ ರೆಡ್ಡಿ ಇದ್ದರು.
Published on

ಶಿವಮೊಗ್ಗ: ವಂಶಪರಂಪರೆ ರಾಜಕಾರಣ ರಾಷ್ಟ್ರಕ್ಕೆ ಮಾರಕ. ಈಗಿರುವ ಬಹುಪಾಲು ರಾಜಕಾರಣಿಗಳು ಸಜ್ಜನ, ಭ್ರಷ್ಟಾಚಾರ ರಹಿತ ರಾಜಕೀಯ ಮಾಡುತ್ತಿಲ್ಲ ಎಂದು ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ದೂರಿದರು.

ಕರ್ನಾಟಕ ರಾಷ್ಟ್ರ ಸಮಿತಿಯಿಂದ ಕರ್ನಾಟಕಕ್ಕಾಗಿ ನಾವು-ರಾಜ್ಯಾದ್ಯಂತದ ಬೈಕ್ ಜಾಥಾ ಶಿವಮೊಗ್ಗಕ್ಕೆ ಆಗಮಿಸಿದ ಬಳಿಕ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕೆ ವಂಶಪಾರಂಪರ್ಯ ರಾಜಕಾರಣದ ಅಗತ್ಯವಿಲ್ಲ. ಭ್ರಷ್ಟಾಚಾರಕ್ಕೂ, ವಂಶಪಾರಂಪರ್ಯ ರಾಜಕಾರಣಕ್ಕೂ ನೇರ ಸಂಬಂಧ ಇದೆ. ಹಾಗಾಗಿ ಇಂತಹ ರಾಜಕಾರಣ ಮಾಡುತ್ತಿರುವ ರಾಜಕೀಯ ಪಕ್ಷಗಳನ್ನು ಧಿಕ್ಕರಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನ್ಮದಿನದ ಶುಭಾಶಯ ಕೋರುವ ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಅವರ ತಂದೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಸಮಾಜವಾದಿ ಪಕ್ಷ, ಕ್ರಾಂತಿ ರಂಗ ಸೇರಿ ಎಲ್ಲ ಪಕ್ಷಗಳಿಗೂ ಪಕ್ಷಾಂತರ ಮಾಡಿದ್ದರು. ಅವರ ಮಕ್ಕಳು ಕೂಡ ಅವರದೇ ಹಾದಿಯಲ್ಲಿ ಪಕ್ಷಾಂತರ ಮಾಡಿದ್ದಾರೆ. ಇನ್ನು ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಹಾಲಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಸೇರಿ ಎಲ್ಲರೂ ವಂಶಪಾರಂಪರ್ಯ ರಾಜಕಾರಣಕ್ಕೆ ಜೋತು ಬಿದ್ದಿದ್ದಾರೆ ಎಂದು ಟೀಕಿಸಿದರು.
ಪಕ್ಷದ ಶಿವಮೊಗ್ಗ ಉಸ್ತುವಾರಿ ಮಂಜುನಾಥ್ ಮಾತನಾಡಿ, ರಾಜಕೀಯ ಪಕ್ಷಗಳು ಅಭಿವೃದ್ಧಿ ಎಂದರೆ ಕಾಂಕ್ರಿಟ್ ನಿರ್ಮಾಣ ಎಂದುಕೊಂಡಿವೆ. ಕಟ್ಟಡ, ರಸ್ತೆಗಳ ನಿರ್ಮಾಣ ಮಾತ್ರವೇ ಇವರ ಅಭಿವೃದ್ಧಿ ಆಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕೆಆರ್‌ಎಸ್ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದೆ. ಜನರು ಈ ದೀಕ್ಷೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ದೀಪಕ್, ಜಿಲ್ಲಾಧ್ಯಕ್ಷ ಪ್ರಭು, ಮೂರ್ತಿ, ನಂದಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net