

ಚಾಮರಾಜನಗರ: ತಾಲೂಕಿನ ಅರಳೀಪುರ ಹಾಗೂ ಹೆಬ್ಬಸೂರು ಬಳಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕರಿಕಲ್ಲು ಗಣಿಗಾರಿಕೆಯನ್ನು ಶನಿವಾರ ಅಧಿಕಾರಿಗಳು ಬಂದ್ ಮಾಡಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಗುಡ್ಡದಲ್ಲಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವುಗೊಳಿಸಿದರು. ಗಣಿಗಾರಿಕೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಜೆಸಿಬಿ ಯಂತ್ರದ ಮೂಲಕ ಮುಚ್ಚಿಸಲಾಯಿತು.
ಅಕ್ರಮ ಗಣಿಗಾರಿಕೆ ಬಗ್ಗೆ ಅರಳೀಪುರ, ಹೆಬ್ಬಸೂರು, ದಡಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಗಣಿ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಗಣಿ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದರಂತೆ ಶನಿವಾರ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಗಣಿಗಾರಿಕೆಯನ್ನು ಬಂದ್ ಮಾಡಲಾಯಿತು.
ಅರಳೀಪುರ ಹಾಗೂ ಹೆಬ್ಬಸೂರು ಗ್ರಾಮದ ಬಳಿ ಇರುವ ಸರ್ವೇ ನಂ. 272 ಬಿಳಿ ಕಲ್ಲು ಗುಡ್ಡ ಸರ್ಕಾರಕ್ಕೆ ಸೇರಿದ ಜಮೀನಾಗಿದ್ದು, 2002ನೇ ಸಾಲಿನಿಂದ 2007 ರವರೆಗೆ ಆರು ಖಾಸಗಿ ವ್ಯಕ್ತಿಗಳಿಗೆ ಕ್ವಾರೆ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಅವಧಿ ಮುಗಿದರೂ ಗಣಿಗಾರಿಕೆ ಮುಂದುವರಿಸಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾಗಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ದೂರು ದಾಖಲಾಗಿದ್ದರೂ ಇತ್ತೀಚೆಗೆ 15 ದಿನಗಳಿಂದ ಮತ್ತೆ 12 ಜನರು ಒಟ್ಟಾಗಿ ಗಣಿಗಾರಿಕೆ ನಡೆಸುತ್ತಿದ್ದರು ಎಂದು ಗಣಿ ಅಧಿಕಾರಿಗಳು ತಿಳಿಸಿದ್ದಾರೆ.
ಗಣಿ ಇಲಾಖೆ ಉಪ ನಿರ್ದೇಶಕಿ ಡಾ.ಲಕ್ಷ್ಮಮ್ಮ ಮಾತನಾಡಿ, ಹಿಂದೆಯೇ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ದಾಖಲಾಗಿತ್ತು. ಆಗ ಗಣಿಗಾರಿಕೆಗೆ ಬ್ರೇಕ್ ಹಾಕಲಾಗಿತ್ತು. 12 ಜನ ಮತ್ತೆ ಗಣಿಗಾರಿಕೆ ಮುಂದುವರಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಯಾರೂ ಪ್ರವೇಶ ಮಾಡದಂತೆ ಸುತ್ತಲೂ ಜೆಸಿಬಿಗಳ ಮೂಲಕ ಕಂದಕಗಳನ್ನು ನಿರ್ಮಿಸಲಾಗಿದೆ. ಗಣಿಗಾರಿಕೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ ಹಾಗೂ ಕಾರ್ಮಿಕರಿಗಾಗಿ ನಿರ್ಮಾಣ ಮಾಡಿಕೊಂಡಿದ್ದ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ ಎಂದರು.
ಗಣಿ ವಿಜ್ಞಾನಿಗಳಾದ ನಾಗರಾಜು, ಪುಷ್ಪಾ, ಸುಬ್ರಹ್ಮಣ್ಯ, ಕಂದಾಯ ನಿರೀಕ್ಷಕ ಚಿಕ್ಕಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.