ಗುತ್ತಿಗೆ ನೌಕರಿ, ಸರ್ಕಾರದ ಬೊಕ್ಕಸಕ್ಕೆ ಕತ್ತರಿ; ಏಜೆನ್ಸಿಗಳಿಗೆ ಬ್ರೇಕ್ ಹಾಕಲು ಸರ್ಕಾರದ ಮೇಲೆ ಒತ್ತಡ

vidhanasoudha
Published on

ಸಣ್ಣದೋ ದೊಡ್ಡದೋ ಸರ್ಕಾರಿ ಕೆಲಸ ಯಾರಿಗೆ ಬೇಡ ಹೇಳಿ? ಕಾಯಂ ನೌಕರಿಯೋ, ಗುತ್ತಿಗೆಯೋ ಸರ್ಕಾರಿ ಕೆಲಸಕ್ಕೆ ಸೇರಿದರೆ ಸಾಕು ಎಂಬ ಮನೋಭಾವ ಎಲ್ಲರಲ್ಲಿದೆ. ಸರ್ಕಾರಗಳೂ ಅಷ್ಟೆ, ‘ಮಿನಿಮಮ್ ಗೌರ್ವೆಂಟ್, ಮ್ಯಾಕ್ಸಿಮಮ್ ಗವರ್ನೆನ್ಸ್’ ಪರಿಕಲ್ಪನೆಯಲ್ಲಿ ಆಡಳಿತ ನಿರ್ವಹಿಸುತ್ತಿವೆ. ಕಾಯಂ ಕೆಲಸ ಕೊಟ್ಟು ಬೊಕ್ಕಸಕ್ಕೆ ಹೊರೆ ಮಾಡಿಕೊಳ್ಳುವುದು ಏಕೆ ಎಂದು ಗುತ್ತಿಗೆ, ಹೊರಗುತ್ತಿಗೆ ನೇಮಕ ಮಾಡಿಕೊಳ್ಳುತ್ತಿವೆ. ಆದರೆ ಈ ಗುತ್ತಿಗೆ ಕಾರ್ವಿುಕರು ದಿನದಿಂದ ದಿನಕ್ಕೆ ಸರ್ಕಾರಕ್ಕೆ ಹೊರೆಯಾಗುತ್ತಿದ್ದು, ಖಾಸಗಿ ಏಜೆನ್ಸಿಗಳಿಗೆ ಮಾತ್ರ ಲಾಭದಾಯಕವಾಗುತ್ತಿದ್ದಾರೆ!

ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 1.25 ಲಕ್ಷಕ್ಕೂ ಅಧಿಕ ಹೊರ ಗುತ್ತಿಗೆ ನೌಕರರಿದ್ದು, ಇವರ ವೇತನಕ್ಕಾಗಿ ಸರ್ಕಾರ ವಾರ್ಷಿಕ 10-12 ಸಾವಿರ ಕೋಟಿ ರೂ.ಗಳಿಂದ ವೆಚ್ಚ ಮಾಡುತ್ತಿದೆ!

ಆದರೆ ಈ ನೌಕರರು ಯಾವುದೇ ಹಿಡಿತಕ್ಕೂ-ಹೊಡೆತಕ್ಕೂ ಸಿಗದೆ ಆಡಳಿತ ಯಂತ್ರ ಕುಸಿಯುತ್ತಿದೆ ಎಂಬ ಮಾತು ಆಗಾಗ ಕೇಳಿ ಬರುತ್ತಿದೆ. ಈ ಕೂಗು ಈಗ ಸ್ಪಷ್ಟ ಸ್ವರೂಪ ಪಡೆಯುತ್ತಿದ್ದು, ಗುತ್ತಿಗೆ ನೌಕರಿಗೆ ಕತ್ತರಿ ಹಾಕುವಂತೆ ಸರ್ಕಾರದ ಮೇಲೆ ಒತ್ತಡ ಬರುತ್ತಿವೆ.

ಎಲ್ಲಿ ಹೊರಗುತ್ತಿಗೆ ಹೆಚ್ಚು?: ಬಹುತೇಕ ಸರ್ಕಾರದ ಎಲ್ಲ ಇಲಾಖೆ, ನಿಗಮ-ಮಂಡಳಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡರೂ ಕೆಲಸ ಕಾರ್ಯಗಳು ಮಾತ್ರ ಸುಸೂತ್ರವಾಗಿ ಸಾಗುತ್ತಿಲ್ಲ ಎಂಬ ಆರೋಪ ಹೊಸದೇನೂ ಅಲ್ಲ.

ನೇಮಕದಲ್ಲಿ ಗೋಲ್ ಮಾಲ್: ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ಕಾಯಂಗೊಳಿಸುವಂತೆ ಹೋರಾಟಗಳು ಹೆಚ್ಚುವ ಕಾರಣ ಸರ್ಕಾರ ಏಜೆನ್ಸಿಗಳ ಮೂಲಕ ಹೊರ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದೆ. ಗುತ್ತಿಗೆ ನೌಕರರನ್ನು ಪೂರೈಸಲು ಕರೆಯುವ ಟೆಂಡರ್​ನಲ್ಲೇ ಗೋಲ್‍ಮಾಲ್ ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಸಾಕಷ್ಟು ಸಂಖ್ಯೆಯ ದೂರುಗಳು ಕೋರ್ಟ್ ಮೆಟ್ಟಿಲೇರಿವೆ.

ಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುತ್ತೇವೆ. ನಂತರ ನಿಮ್ಮ ಕೆಲಸ ಕಾಯಂ ಆಗುತ್ತದೆ ಎಂಬ ಆಮಿಷ ಒಡ್ಡಿ ಏಜೆನ್ಸಿಗಳು ನೌಕರಿ ಬಯಸುವವರಿಂದ ಹಣ ಕಿತ್ತುಕೊಂಡಿರುವ ದೂರುಗಳು ನಿರಂತರವಾಗಿ ಪೊಲೀಸ್ ಠಾಣೆ/ಕೋರ್ಟ್ ಮೆಟ್ಟಿಲೇರುತ್ತಿವೆ. ಕಠಿಣ ನಿಯಮಗಳನ್ನು ಜಾರಿಗೊಳಿಸಿದಾಗಲೂ ಏಜೆನ್ಸಿಗಳು ಸರ್ಕಾರಕ್ಕೆ ತೋರಿಸುವ ಲೆಕ್ಕವೇ ಒಂದು, ಪೂರೈಸುವ ನೌಕರರ ಸಂಖ್ಯೆಯೇ ಇನ್ನೊಂದು ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ.

ಸೌಲಭ್ಯ ವಂಚನೆ: ಏಜೆನ್ಸಿಗಳು ಗುತ್ತಿಗೆ ನೌಕರರಿಗೆ ಸಕಾಲಕ್ಕೆ ಹಾಗೂ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಅಲ್ಲದೆ, ಪಿಎಫ್, ಇಎಸ್​ಐ ಸೇರಿ ನ್ಯಾಯೋಚಿತವಾಗಿ ಕೊಡಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ಮತ್ತೆ ಕೆಲವು ಕಡೆ ನಿಗದಿ ಪಡಿಸಿದ ಸಂಬಳ ನಿಗದಿತ ವೇಳೆಗೆ ನೌಕರರ ಕೈ ಸೇರುತ್ತಿಲ್ಲ ಎಂದು ಏಜೆನ್ಸಿಗಳ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದಿವೆ. ಹಲವು ಇಲಾಖೆಗಳಲ್ಲಂತೂ ಹೊರ ಗುತ್ತಿಗೆ ನೌಕರರು ಇಲಾಖೆ ಮುಖ್ಯಸ್ಥರ ಹಿಡಿತಕ್ಕೆ ಸಿಗುತ್ತಿಲ್ಲ. ಬಯೋಮೆಟ್ರಿಕ್, ಸಿಸಿ ಕ್ಯಾಮರಾ ಸೇರಿ ಹಲವು ಹತ್ತು ನಿಯಮ ಅಳವಡಿಸಿದ್ದರೂ ಯಾವ ನೌಕರರು ಎಲ್ಲಿ ಕೆಲಸ ಮಾಡುತ್ತಾರೆ? ಎಲ್ಲಿ ಹೋಗುತ್ತಾರೆ? ಎಂಬುದು ತಿಳಿಯದೆ ಅಧಿಕಾರಿಗಳು ರೋಸಿ ಹೋಗಿದ್ದಾರೆ.

ಖಾಯಂ ನೌಕರರನ್ನು ನೇಮಕ ಮಾಡಿಕೊಳ್ಳುವ ಮೂಲಕ ಹಂತ ಹಂತವಾಗಿ ಗುತ್ತಿಗೆ ಪದ್ಧತಿ ಕೈಬಿಡಬೇಕು. ಏಜೆನ್ಸಿಗೆ ಲಾಭ ಮಾಡಿಕೊಡುವ ಬದಲು ಇಲಾಖೆ ಮುಖ್ಯಸ್ಥರ ಮೂಲಕವೇ ಗುತ್ತಿಗೆ ನೌಕರರನ್ನು ನೇಮಕ ಮಾಡಿ ಶೋಷಣೆ ತಪ್ಪಿಸಬೇಕು. | ಸಿ.ಎಸ್.ಷಡಕ್ಷರಿ ಅಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

| ವಿಲಾಸ ಮೇಲಗಿರಿ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net