

ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರು
ಹನೂರು : ಅಜ್ಜೀಪುರ - ಹನೂರು ಮಾರ್ಗಮಧ್ಯೆ ಶನಿವಾರ ಕೆಎಸ್ಸಾರ್ಟಿಸಿ ಬಸ್‌ನ ಬ್ರೇಕ್ ವಿಫಲವಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ. ಬೆಳಗ್ಗೆ 10ರ ವೇಳೆಯಲ್ಲಿ ಬಸ್ ರಾಮಾಪುರದಿಂದ ಹನೂರಿನತ್ತ ತೆರಳುತ್ತಿತ್ತು. 60 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ಅಜ್ಜೀಪುರ ಗ್ರಾಮ ಸಮೀಪದ ಆಂಜನೇಯಸ್ವಾಮಿ ದೇಗುಲದ ಬಳಿ ಬಸ್‌ನ ಬ್ರೇಕ್ ವಿಫಲಗೊಂಡಿತು. ಇದನ್ನು ಅರಿತ ಚಾಲಕ ರಸ್ತೆ ಬದಿಯಲ್ಲಿ ನಿಧಾನವಾಗಿ ಬಸ್ ನಿಲ್ಲಿಸುವ ಮೂಲಕ ಸಮಯ ಪ್ರಜ್ಞೆಯನ್ನು ಮೆರೆದಿದ್ದು ಶ್ಲಾಘನೆಗೆ ಪಾತ್ರವಾಗಿದೆ. ಬಸ್ಸಿನಲ್ಲಿದ್ದವರು ಈ ಸಂದರ್ಭ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕನಿಗೆ ಧನ್ಯತೆ ಸಮರ್ಪಿಸಿದ್ದಾರೆ. ನಂತರ ಬೇರೊಂದು ಬಸ್ಸಿನಲ್ಲಿ ಎಲ್ಲರೂ ನಿಗದಿತ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡಲಾಯಿತು.
ಆಗ್ರಹ : ಸಾರಿಗೆ ಸಂಸ್ಥೆಯವರು ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಮಾರ್ಗಕ್ಕೆ ಬಿಡಬೇಕು ಎಂದು ಬಸ್‌ನಲ್ಲಿದ್ದ ಪ್ರಯಾಣಿಕರು ಆಗ್ರಹಿಸಿದರು. ಈ ಬಗ್ಗೆ ಕೆಎಸ್ಸಾರ್ಟಿಸಿ ಡಿಪೋ ಮೇನೇಜರ್ ಮತ್ತು ತಾಂತ್ರಿಕ ವಿಭಾಗ ಮುಖ್ಯಸ್ಥರು ಗಮನ ಹರಿಸಬೇಕು. ಇಲ್ಲದಿದ್ದರೆ ನೂರಾರು ಜನರ ಪ್ರಾಣಕ್ಕೆ ಸಂಚಕಾರ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.