ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಬಿತ್ತು ಬ್ರೇಕ್​!

kadlekayi parishe
Published on

ಬೆಂಗಳೂರು: ಪ್ರತಿವರ್ಷ ಕಡೇ ಕಾರ್ತಿಕ ಸೋಮವಾರ ಬರುತ್ತಿದ್ದಂತೆ ರಾಜ್ಯ ರಾಜಧಾನಿಯಲ್ಲಿ ಕಡ್ಲೆಕಾಯಿ ಪರಿಷೆಯದ್ದೇ ಸದ್ದು.

ಸವನಗುಡಿ ದೊಡ್ಡಬಸವಣ್ಣ ದೇವಾಲಯದಲ್ಲಿ ನಡೆಯುತ್ತಿದ್ದ ಈ ಪರಿಷೆಗೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ವ್ಯಾಪಾರಿಗಳು ಮೂರ್ನಾಲ್ಕು ದಿನ ಬಿಡಾರ ಹೂಡುತ್ತಿದ್ದರು. ಜಾತ್ರೆಯಂತೆ ಕಂಗೊಳಿಸುತ್ತಿದ್ದ ಇಲ್ಲಿನ ರಸ್ತೆ ಬದಿ ರಾಶಿ-ರಾಶಿ ಕಡ್ಲೆಕಾಯಿ ಕಾಣಸಿಗುತಿತ್ತು. ಗ್ರಾಹಕರು, ಪ್ರವಾಸಿಗರು, ಭಕ್ತರು, ಸಾರ್ವಜನಿಕರು... ತಂಡೋಪತಂಡವಾಗಿ ಪರಿಷೆಗೆ ಬರುತ್ತಿದ್ದರು.

ಒಂದು ವಾರ ಕಾಲ ಲಕ್ಷಾಂತರ ಜನರು ಸೇರುವ ಮೂಲಕ ದೊಡ್ಡ ಜಾತ್ರೆ ಏರ್ಪಡುತ್ತಿದ್ದ ಕಡ್ಲೆಕಾಯಿ ಪರಿಷೆಗೆ ಈ ಬಾರಿ ಕರೊನಾ ಛಾಯೆ ಆವರಿಸಿದೆ. ನಗರದಲ್ಲಿ ಕರೊನಾ ಹೆಚ್ಚಾಗಿದ್ದು, ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆಯನ್ನು ಜನಸಂದಣಿ ಇಲ್ಲದೆ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಆಚರಿಸಲು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ತೀರ್ಮಾನಿಸಿದೆ.

ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಮೇ ತಿಂಗಳು ನಡೆದ ಸಭೆಯಲ್ಲಿ ಕರೊನಾ ಸೋಂಕು ಒಂದು ವಿಪತ್ತು ಆಗಿದ್ದು, ಯಾವುದೇ ಜಾತ್ರೆ, ದೊಡ್ಡ ಮಟ್ಟದ ಸಭೆ ಮತ್ತು ಸಮಾರಂಭ, ದೇವರ ಆಚರಣೆ ಮಾಡದಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಷೆಯನ್ನು ದೇವಾಲಯದ ಒಳಗೆ ಪೂಜೆಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಬೀದಿ ಬದಿ ಕಡ್ಲೆಕಾಯಿ ಮಾರಾಟ ಮಾಡದಂತೆ, ಅಂಗಡಿ ಮುಂಗಟ್ಟು ಹಾಕದಂತೆ, ಜಾತ್ರೆ ಸಾಮಗ್ರಿ ಅಳವಡಿಸಬಾರದು. ಈ ಕುರಿತು ಜನರಿಗೆ ಜಾಗೃತಿ ಮೂಡಿಸುವಂತೆ ಬಿಬಿಎಂಪಿ, ಜಿಲ್ಲಾಧಿಕಾರಿಗಳಿಗೆ ದೊಡ್ಡಗಣಪತಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಹಣಾ ಅಧಿಕಾರಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net