ಆ.20ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಕೆಚ್ಚೆದೆಯ ಕನ್ನಡಿಗರ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ ಭದ್ರಣ್ಣ ಮಾಹಿತಿ

Brave Kannadiga Forum Press Conference Mandya
Published on

ಮಂಡ್ಯ: ಶರಣರ ವಚನಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಹಾಗೂ ವಚನ ದರ್ಶನ ಪುಸ್ತಕದ ವಿರುದ್ಧ ವಿಶ್ವಗುರು ಬಸವಣ್ಣ ಅನುಯಾಯಿಗಳ ಒಕ್ಕೂಟದಿಂದ ಆ.20ರಂದು ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೆಚ್ಚೆದೆಯ ಕನ್ನಡಿಗರ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ ಭದ್ರಣ್ಣ ಹೇಳಿದರು.

ವಚನದರ್ಶನ ಪುಸ್ತಕವನ್ನು ದೇಶಾದ್ಯಂತ ವ್ಯಕ್ತಿಗತವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ತೀವ್ರ ಪ್ರತಿರೋಧವಿದೆ. ವಚನದರ್ಶನ ಕಳಪೆ ಪುಸ್ತಕವಾಗಿದೆ. ಬಸವ ತತ್ವವನ್ನು ಹಾಳು ಮಾಡುವ ಹುನ್ನಾರದಿಂದ ಈ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ ಚೊಂಡಿ ಮಾತನಾಡಿ, 900 ವರ್ಷ ವಚನದ ಬಗ್ಗೆ ಇರದ ಪ್ರೀತಿ ಈಗೇಕೆ ಬಂದಿದೆ. ವಚನ ಅರಿಯದವರ ಮಾತು ಕೇಳಿ ಪುಸ್ತಕ ಬಿಡುಗಡೆ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಇದನ್ನು ಕೆಲವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಂತಹ ಕುತಂತ್ರ ನಡೆಸಲಾಗುತ್ತಿದೆ ಎಂದು ದೂರಿದರು.

ಲಿಂಗಾಯತ ಧರ್ಮ ಎಲ್ಲರನ್ನು ಅಪ್ಪಿಕೊಳ್ಳುತ್ತದೆ. ಇಲ್ಲಿ ಮೂಢನಂಬಿಕೆ, ಕಂದಾಚಾರ ಎನ್ನುವುದು ಇಲ್ಲ. ವಚನ ಸಾಹಿತ್ಯ ಬೆಳೆದರೆ ಮೂಢನಂಬಿಕೆ ಕಿತ್ತೊಗೆಯುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಕುತಂತ್ರ ನಡೆಸಲಾಗುತ್ತಿದೆ. ಬಸವಣ್ಣ ಅವರನ್ನು ಗಡಿಪಾರು ಮಾಡಿದವರು, ಕೊಲೆ ಮಾಡಿದ ಸಮುದಾಯ ಈ ಕುತಂತ್ರದ ಹಿಂದಿದೆ ಎಂದು ಆರೋಪಿಸಿದರು.

ಮುಖಂಡರಾದ ಬೆಟ್ಟಹಳ್ಳಿ ಮಂಜುನಾಥ್, ಎಂ.ಎಸ್.ಮಂಜುನಾಥ್, ಶಂಭುಲಿಂಗಪ್ಪ, ಶಿವರುದ್ರಸ್ವಾಮಿ, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net