ಯುವಕನಿಗೆ ಬಿಳಿ ಬೆಂಡೆ ತಂದ ಅದೃಷ್ಟ

bende
ಜೀವನ್ ಜಿ. ಕೋಟ್ಯಾನ್ ತಮ್ಮ 50 ಸೆಂಟ್ಸ್ ಜಾಗದಲ್ಲಿ ಬೆಳೆದ ಬಿಳಿಬೆಂಡೆ ಕೃಷಿ.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಎಂಬಿಎ ಶಿಕ್ಷಣ ಪಡೆದ ಯುವಕ ಕೃಷಿಯಲ್ಲಿ ಸಾಧನೆ ಮಾಡುವ ಸಲುವಾಗಿ ಬೆಂಗಳೂರಿನಲ್ಲಿದ್ದ ಕೈ ತುಂಬ ವೇತನ ನೀಡುತ್ತಿದ್ದ ಉದ್ಯೋಗ ತೊರೆದು ತನ್ನೂರಿಗೆ ಹಿಂದಿರುಗಿದ್ದು, 50 ಸೆಂಟ್ಸ್ ಜಾಗದಲ್ಲಿ ಕಾರ್ಕಳದ ಬ್ರಾೃಂಡ್ ಬಿಳಿ ಬೆಂಡೆ ಬೆಳೆದಿದ್ದಾರೆ. ಜತೆಗೆ 7ಎಕರೆ ಜಾಗದಲ್ಲಿ ಕೃಷಿ ಮಾಡುವ ಮೂಲಕ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ.

ಕಾರ್ಕಳ ತಾಲೂಕಿನ ಸಾಣೂರು ಹಾಗೂ ಮಿಯ್ಯರು ಗ್ರಾಮದ ಗಡಿಭಾಗವಾದ ಪರದೆ ಎಂಬಲ್ಲಿ ಗೋಪಾಲ್ ಹಾಗೂ ಲೀಲಾ ದಂಪತಿ ಪುತ್ರ ಜೀವನ್ ಜಿ. ಕೋಟ್ಯಾನ್ ಎಂಬುವರು ಬಿಳಿ ಬೆಂಡೆಯ ಕೃಷಿ ಮಾಡಿದ್ದು, ಉತ್ತಮ ಇಳುವರಿ ಪಡೆದು ಯಶಸ್ವಿಯಾಗಿದ್ದಾರೆ.

ಕಾರ್ಕಳದ ಬ್ರಾೃಂಡ್‌ಗಳಲ್ಲಿ ಬಿಳಿ ಬೆಂಡೆ ಒಂದಾಗಿದ್ದು, ಗದ್ದೆಯಲ್ಲಿ ಬೆಳೆದಿದ್ದರಿಂದ ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಪ್ಲಾಸ್ಟಿಕ್ ಹೊದಿಕೆ ಹಾಕಿ ರಕ್ಷಿಸಲಾಗಿದೆ. ಆದರೂ ಈ ಬಾರಿ ತಾಲೂಕಾದ್ಯಂತ ಸುರಿದ ನಿರಂತರ ಮಳೆಯಿಂದ ಇಳುವರಿಗೆ ಹೊಡೆತ ಬಿದ್ದಿದೆ. ಹೀಗಾಗಿ ನಿರೀಕ್ಷಿತ ಇಳುವರಿ ದೊರೆಯದೇ ಇದ್ದರೂ ಲಾಭದಾಯಕವಾಗಿಯೂ ಇದೆ.

ಶ್ರಾವಣದಲ್ಲಿ ಬೇಡಿಕೆ ಹೆಚ್ಚು

ಕಾರ್ಕಳದ ಬಿಳಿಬೆಂಡೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಶ್ರಾವಣ ಮಾಸದಲ್ಲಿ ತುಸು ಹೆಚ್ಚೇ ಇದೆ. ಸಾಮಾನ್ಯ ದಿನಗಳಲ್ಲಿ 100 ರೂ.ವಿನಿಂದ 150 ರೂ. ತನಕ ಮಾರಾಟವಾಗುತ್ತಿದ್ದ ಬೆಂಡೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿಗೆ ಸುಮಾರು 160 ರೂ.ರಿಂದ 200 ರೂ.ತನಕ ಬೆಲೆ ಇದೆ. ಹೆಚ್ಚಿನ ಗ್ರಾಹಕರು ತೋಟಕ್ಕೆ ಭೇಟಿ ನೀಡಿ ನೇರವಾಗಿ ಜೀವನ್ ಬಳಿಯಿಂದ ಬೆಂಡೆ ಖರೀದಿಸುತ್ತಿದ್ದಾರೆ.

ಇತರ ಬೆಳೆಗಳು

ಲೀಸಿಗೆ ಪಡೆದ ಏಳು ಎಕರೆ ಭೂಮಿಯಲ್ಲಿ ಅನಾನಸು, ಅಡಕೆ, ಬಾಳೆ, ಸಾಂಬ್ರಳ್ಳಿ ಜತೆಗೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿ ಮಿಶ್ರ ಕೃಷಿಯಲ್ಲಿ ಈ ಯುವ ಯಶಸ್ಸು ಪಡೆದಿದ್ದಾರೆ.

ಶಾಸಕರಿಂದ ಕೃಷಿಗೆ ಸ್ಫೂರ್ತಿ

ಸ್ಥಳೀಯ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ವರ್ಷಗಳ ಹಿಂದೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಸ್ಥಳೀಯ ಬೆಳೆಯಾದ ಬಿಳಿಬೆಂಡೆ ಬೆಳೆಯಲು ಕ್ಷೇತ್ರಾದ್ಯಂತ ಅಭಿಯಾನವನ್ನು ನಡೆಸಿ, ಸುಮಾರು 20 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಉಚಿತವಾಗಿ ಬಿಳಿಬೆಂಡೆ ಬೀಜವನ್ನು ನೀಡಿದ್ದರು. ಈ ಅಭಿಯಾನದಿಂದ ಪ್ರೇರಣೆಗೊಂಡ ಜೀವನ್ ತಮ್ಮ 50 ಸೆಂಟ್ಸ್ ಜಾಗದಲ್ಲಿ 800ಕ್ಕೂ ಹೆಚ್ಚು ಬಿಳಿಬೆಂಡೆ ಗಿಡ ಬೆಳೆದಿದ್ದಾರೆ. ಈ ಬಾರಿ ಮಳೆಯ ನಡುವೆಯೂ ಉತ್ತಮ ಇಳುವರಿ ಪಡೆದಿರುವುದು ವಿಶೇಷ.

ಉದ್ಯೋಗ ತೊರೆದು ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎನ್ನುವ ಮನಸ್ಸಿನಿಂದ ತಂದೆಯ ಜತೆಯಲ್ಲಿ ಸೇರಿಕೊಂಡೆ. ಇದೀಗ 7 ಎಕರೆಯಲ್ಲಿ ಕೃಷಿಯನ್ನು ಮಾಡುವುದರ ಜೊತೆಯಲ್ಲಿ 50 ಸೆಂಟ್ಸ್ ಜಾಗದಲ್ಲಿ ಬಿಳೆ ಬೆಂಡೆ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆಯಿದೆ.-ಜೀವನ್ ಜಿ. ಕೋಟ್ಯಾನ್, ಕೃಷಿಕ.

ಯುವಕರು ಪದವಿ ಪಡೆದು ಯಾವುದೋ ಕಂಪನಿಯಲ್ಲಿ ದುಡಿಯುವವರ ನಡುವೆ ಕೃಷಿಯಲ್ಲಿ ಏನಾದರೂ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಬಿಳಿ ಬೆಂಡೆ ಬೆಳೆದು ಯಶಸ್ವಿಯಾದ ಯುವ ಕೃಷಿಕ ಎಲ್ಲರಿಗೂ ಮಾದರಿ. ನಮ್ಮ ಯೋಚನೆಯೊಂದು ಯುವಕರಿಗೆ ಈ ರೀತಿ ಪ್ರೇರಣೆಯಾಗಿದೆ ಎಂಬುದೇ ಹೆಮ್ಮೆಯ ವಿಚಾರ.-ವಿ.ಸುನೀಲ್ ಕುಮಾರ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net