ಬ್ರಾಂಡೆಡ್ ಶೂಗಾಗಿ ಅಲೆದಾಟ!

School Shoes
Published on

ಬೆಳಗಾವಿ: ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಬ್ರಾಂಡೆಡ್ ‘ಶೂ ಮತ್ತು ಸಾಕ್ಸ್’ ಖರೀದಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಲೆದಾಟ ನಡೆಸಿದೆ.

ಸರ್ಕಾರವು ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿಸಲು ಎಸ್‌ಡಿಎಂಸಿಗಳಿಗೆ ಅಕಾರ ನೀಡಿದೆ. ಇದಕ್ಕಾಗಿ ಎಲ್ಲ ಶಾಲೆಗಳಲ್ಲಿ ಖರೀದಿ ಸಮಿತಿಯನ್ನೂ ರಚಿಸಿ, ಬಾಟಾ, ಪ್ಯಾರಾಗಾನ್, ಲಿಬರ್ಟಿ ಸೇರಿ 10ರಿಂದ 15 ಬ್ರಾಂಡೆಡ್ ಶೂ ಮತ್ತು ಸಾಕ್ಸ್‌ಗಳನ್ನೇ ಖರೀದಿಸಲು ಸೂಚಿಸಿದೆ. ಆದರೆ ನಿಗದಿಪಡಿಸಿದ ದರದಲ್ಲಿ ಈ ಬ್ರಾಂಡೆಡ್ ಶೂ, ಸಾಕ್ಸ್‌ಗಳು ಕರ್ನಾಟದಲ್ಲಿ ದುಬಾರಿಯಾಗಿದ್ದರಿಂದ ಬೇರೆ ರಾಜ್ಯಗಳತ್ತ ಮುಖಮಾಡಿರುವ ಸಮಿತಿ ಎಲ್ಲಿ ಕಡಿಮೆ ದರದಲ್ಲಿ ಸಿಗುತ್ತಿವೆ ಎಂದು ಹುಡುಕಾಟ ನಡೆಸಿವೆ.

ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ 4.50 ಲಕ್ಷ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿಗಾಗಿ ಎಸ್‌ಡಿಎಂಸಿಗಳಿಗೆ 12 ಕೋಟಿ ರೂ. (ಚಿಕ್ಕೋಡಿಗೆ 7.50 ಕೋಟಿ ರೂ., ಬೆಳಗಾವಿಗೆ 4.50 ಕೋಟಿ ರೂ.) ಅನುದಾನ ಬಿಡುಗಡೆ ಮಾಡಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ಶೂ ಖರೀದಿಸಲು ಒಂದು ಜೊತೆಗೆ 265 ರೂ., 6ರಿಂದ 8ನೇ ತರಗತಿ ಮಕ್ಕಳಿಗೆ ತಲಾ 295 ರೂ. ಮತ್ತು 9ರಿಂದ 10ನೇ ತರಗತಿಯ ಪ್ರತಿ ಮಗುವಿಗೆ 325 ರೂ. ದರ ನಿಗದಿ ಮಾಡಿದೆ. ಆದರೆ, ಶಾಲೆಗಳು ಆರಂಭಗೊಂಡು ಮೂರು ತಿಂಗಳು ಕಳೆದದೂ ಎಸ್‌ಡಿಎಂಸಿಗಳು ಶೂ ಮತ್ತು ಸಾಕ್ಸ್ ಖರೀದಿಸಿಲ್ಲ. ಹೀಗಾಗಿ ಬಡವರ ಮಕ್ಕಳು ಬರಿಗಾಲಲ್ಲೇ ಶಾಲೆಗಳಿಗೆ ಬರುತ್ತಿವೆ. ಉತ್ತಮ ಸಂಸ್ಥೆಗಳಿಂದ ಶೂ-ಸಾಕ್ಸ್ ಖರೀದಿಗೆ ಕನಿಷ್ಠ ಮೂರು ಕೊಟೇಷನ್ ಪಡೆಯಬೇಕು. ವಿದ್ಯಾರ್ಥಿಗಳ ಪಾದರಕ್ಷೆ ಅಳತೆ ದಾಖಲಿಸಬೇಕು. ಈ ಎಲ್ಲ ಪ್ರಕ್ರಿಯೆ ಮೇಲೆ ನಿಗಾವಹಿಸಲು ಜಿಲ್ಲೆಗೊಬ್ಬರಂತೆ ನೋಡಲ್ ಅಕಾರಿಯನ್ನು ನೇಮಿಸಿದೆ ಎಂದು ಅಕಾರಿ ತಿಳಿಸಿದ್ದಾರೆ.

ಮುಂಚಿತವಾಗಿ ಟೆಂಡರ್ ಕೊಡಿ

ಹರಳಯ್ಯ ಸಮಗಾರ ಸಮುದಾಯದವರು ಸ್ಥಿತಿವಂತರಲ್ಲ. ವೃತ್ತಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಇವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಕ್ರಮ ವಹಿಸಬೇಕು.ಅದಕ್ಕಾಗಿ ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ಹಾಗೂ ಸ್ಥಳೀಯ ಚರ್ಮಕಾರ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಶೂಗಳನ್ನು ಖರೀದಿಸುವ ಕೆಲಸ ಆಗಬೇಕು. ಜತೆಗೆ ಒಂದು ವರ್ಷ ಮುಂಚಿತವಾಗಿಯೇ ಶೂಗಳನ್ನು ತಯಾರಿಸಲು ಟೆಂಡರ್ ಕೊಡಬೇಕು ಎಂದು ಕರ್ನಾಟಕ ಚರ್ಮ ಕುಶಲಕರ್ಮಿಗಳ ಸಂಘ ರಾಜ್ಯಾಧ್ಯಕ್ಷ ಸಂತೋಷ ಹೊಂಗಲ ಆಗ್ರಹಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಬ್ರಾಂಡೆಡ್ ‘ಶೂ ಮತ್ತು ಸಾಕ್ಸ್’ ಖರೀದಿಸುವ ಪ್ರಕ್ರಿಯೇ ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಶೂ ಗುಣಮಟ್ಟ ಪರಿಶೀಲನೆಗೆ ನೋಡಲ್ ಅಕಾರಿ ನಿಯೋಜಿಸಲಾಗಿದೆ.| ಹರ್ಷಲ್ ಭೋಯರ್, ಜಿಪಂ ಸಿಇಒ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net