ಪ್ರವಾಸಿಗರನ್ನು ಸೆಳೆಯಲು 'ಬ್ರ್ಯಾಂಡ್ ಮೈಸೂರು’

'Brand Mysore' to attract tourists
Published on

ಮೈಸೂರು: ಮೈಸೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಭಾನುವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 'ಬ್ರ್ಯಾಂಡ್ ಮೈಸೂರು’ ಲೋಗೋ ಮತ್ತು ‘ನಮ್ಮ ಪರಂಪರೆ-ನಿಮ್ಮ ತಾಣ’ ಟ್ಯಾಗ್‌ಲೈನ್ ಅನ್ನು ಅನಾವರಣಗೊಳಿಸಿದರು.

ಮೈಸೂರು ಬ್ರಾೃಂಡಿಂಗ್‌ಗಾಗಿ ಇದು ದೊಡ್ಡ ಹೆಜ್ಜೆಯಾಗಿದ್ದು, ಇದರಿಂದ ಹಲವಾರು ಅನುಕೂಲತೆಗಳು ಆಗಲಿದೆ. ಕೇವಲ ಅಕ್ಕಪಕ್ಕದ ಜಿಲ್ಲೆ ಹಾಗೂ ರಾಜ್ಯದ ಪ್ರವಾಸಿಗರನ್ನು ಸೆಳೆಯುವುದು ಮಾತ್ರ ಇದರ ಉದ್ದೇಶವಲ್ಲ. ವಿಶ್ವದ ಪ್ರವಾಸಿಗಳನ್ನು ಮೈಸೂರಿನತ್ತ ಸೆಳೆಯುವ ಗುರಿಯನ್ನು ಹೊಂದಲಾಗಿದೆ. ಮೈಸೂರನ್ನು ಕೇವಲ ಅರಮನೆಗಳ ನಗರಿ ಎಂದೇ ನೋಡುತ್ತೇವೆ. ಆದರೆ ಇಲ್ಲಿ ಅರಮನೆಯ ಜತೆಗೆ ಹಲವು ಪ್ರವಾಸಿ ತಾಣಗಳು ಇದ್ದು, ಆ ಎಲ್ಲ ಪ್ರವಾಸಿ ಕ್ಷೇತ್ರಗಳನ್ನು ನೋಡಬಹುದು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಮೈಸೂರಿನ ಪಾರಂಪರಿಕ ಅಥವಾ ಹಳೆಯ ಕಟ್ಟಡಗಳನ್ನು ಸರ್ಕಾರದಿಂದ ಮಾತ್ರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಅದರ ರಕ್ಷಣೆಗೆ ಜನರ ಸಹಕಾರ, ಸಹಾಯ ಅವಶ್ಯಕತೆ ಇದೆ. 25 ಸಾವಿರಕ್ಕೂ ಹೆಚ್ಚು ಸ್ಮಾರಗಳು ರಾಜ್ಯದಲ್ಲಿ ಇದ್ದು, ಇದರಲ್ಲಿ ಎಲ್ಲವನ್ನು ರಕ್ಷಿಸಲು ಆಗುತ್ತಿಲ್ಲ. ಸ್ಮಾರಕಗಳ ರಕ್ಷಣೆಗೆ ರಾಜ್ಯದಲ್ಲಿ 500 ಸ್ಮಾರಕಗಳನ್ನು ಗುರುತಿಸಿ ದತ್ತು ನೀಡುವ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು ಎಂದು ಹೇಳಿದರು.

ವಿದೇಶದಲ್ಲಿರುವ ಭಾರತೀಯರಿಗೆ ತಮ್ಮ ಊರಿನ, ಗ್ರಾಮದ ಸ್ಮಾರಕಗಳ ಅಭಿಮಾನದ ಆಸಕ್ತಿ ಇದೆ. ಅಂತಹವರು ತಮ್ಮ ಊರಿನ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಆಸಕ್ತರಾಗಿದ್ದಾರೆ. ಹೀಗಾಗಿ ಸ್ಮಾರಕಗಳನ್ನು ಮುಂದಿನ ದಿನಗಳಲ್ಲಿ ದತ್ತು ತೆಗೆದುಕೊಳ್ಳುವವರಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ.

ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವೂ ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದೆ. ಹಲವಾರು ಜನರು ಧಾರ್ಮಿಕ ಪ್ರವಾಸೋದ್ಯಮ ಕೈಗೊಳ್ಳುತ್ತಿದ್ದಾರೆ. ಸೋಮನಾಥಪುರ, ಹಳೆಬೀಡು ಕ್ಷೇತ್ರಗಳು ಎಲ್ಲರ ಆಕರ್ಷಣೆಯಾಗಿದೆ. ಇದಕ್ಕೆ ಹೊಸ್ಸಳರು ನಿರ್ಮಿಸಿದ ವಿಶಿಷ್ಟಶೈಲಿಯ ವಾಸ್ತುಶಿಲ್ಪ ಹೊಂದಿರುವ ದೇವಾಲುಗಳು ಕಾರಣವಾಗಿದೆ. ಅಲ್ಲಿನ ಕಲೆ, ವಾಸ್ತು ಶಿಲ್ಪ, ಪ್ರವಾಸಿ ತಾಣಗಳನ್ನು ಸಂರಕ್ಷಿಸುವ ಕಾರ್ಯ ಆಗಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಕೇವಲ ಅರಮನೆ, ಮೃಗಾಲಯ ಮಾತ್ರವಲ್ಲದೇ 24ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಇದ್ದು, ಅವುಗಳನ್ನು ಜಗತ್ತಿಗೆ ತೋರಿಸಬೇಕು. ಮೈಸೂರು ಪ್ರವಾಸಿಗರಿಗೆ ಸುರಕ್ಷಿತ ನಗರವಾಗಿದೆ. ದಸರಾ ಹಾಗೂ ಅರಮನೆ ಮಾತ್ರ ಪ್ರವಾಸೋದ್ಯಮದ ಕೇಂದ್ರಬಿಂದುವಲ್ಲ, ತಲಕಾಡು, ಸೋಮನಾಥಪುರ ಸೇರಿದಂತೆ ಹಲವಾರು ತಾಣಗಳಿವೆ. ಅವುಗಳ ಕಡೆಗೆ ಪ್ರವಾಸಿಗರನ್ನು ಸೆಳೆಯಬೇಕು. ಪ್ರವಾಸೋದ್ಯಮ ತಾಣಗಳಿಗೆ ಮೂಲ ಸೌಕರ್ಯ ನೀಡಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ ಸವಿತಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಗಾಯತ್ರಿ, ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಹಾಗೂ ಇತರರು ಇದ್ದರು.

ಲೋಗೋ ವಿಶೇಷತೆಯೇನು?

‘ಬ್ರಾೃಂಡ್ ಮೈಸೂರು’ ಲೋಗೋ ವಿನ್ಯಾಸವು ಮೈಸೂರು ಅರಮನೆ ಮತ್ತು ದೀಪಾಲಂಕಾರವನ್ನು ಬಿಂಬಿಸುವಂತೆ ಒಳಾಂಗಣ ಬಾರ್ಡರ್ ನೀಡಲಾಗಿದೆ. ದಸರಾ ಜಂಬೂಸವಾರಿ ಬಿಂಬಿಸಲು ಚಿನ್ನದ ಅಂಬಾರಿ ಹೊತ್ತ ಎರಡು ಆನೆಗಳನ್ನು, ಆನೆಗಳ ಮೇಲಿನ ಹೊದಿಕೆಯು ಮೈಸೂರು ರೇಷ್ಮೆಯನ್ನು ಬಿಂಬಿಸುವ ಮೈಸೂರು ರೇಷ್ಮೆವಸ್ತ್ರದಂತೆ ವಿನ್ಯಾಸ ಮಾಡಲಾಗಿದೆ. ಎರಡು ಆನೆಗಳ ಮಧ್ಯದಲ್ಲಿ ಮೈಸೂರು ರಾಜವಂಶದ ಲಾಂಛನ ಗಂಡಭೇರುಂಡವನ್ನು ವಿನ್ಯಾಸಿಸಲಾಗಿದ್ದು, ಗಂಡಭೇರುಂಡದ ನೆತ್ತಿಯಲ್ಲಿ ಮೈಸೂರು ವೀಳ್ಯದೆಲೆಯನ್ನು ಹಾಗೂ ಇಕ್ಕೆಲಗಳಲ್ಲಿ ಮೈಸೂರು ಮಲ್ಲಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ವಿನ್ಯಾಸಗೊಳಿಸಲಾಗಿರುವ ಲೋಗೋವನ್ನು ಮೈಸೂರು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳ ಪತ್ರ ವ್ಯವಹಾರಕ್ಕಾಗಿ ಹಾಗೂ ಇತರೆ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೈಸೂರು ಪರಂಪರೆಗಳು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನವಾಗುವಂತೆ ಬಳಸಲು ಉದ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net