

ಬೆಂಗಳೂರು: ಭಾನುವಾರ ತಡರಾತ್ರಿ ವರುಣಾರ್ಭಟಕ್ಕೆ ಬ್ರ್ಯಾಂಡ್ ಬೆಂಗಳೂರು ಮುಳುಗಿದೆ. ಮುಂಜಾನೆ ನಿದ್ದೆಯ ಮಂಪರ್ನಲ್ಲಿದ್ದ ಜನರು ಬೆಚ್ಚಿದ್ದಾರೆ. ಬರೀ 2 ಗಂಟೆ ಅಂತರದಲ್ಲಿ 50-60 ಮಿಮೀ ಸುರಿದ ಮಳೆಗೆ ರಾಜಧಾನಿ ಸಂಪೂರ್ಣವಾಗಿ ನಲುಗಿದ್ದು, ಹಲವು ಕಡೆಗಳಲ್ಲಿ ಅನಾಹುತ ಸೃಷ್ಟಿಯಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡಿ ನಿವಾಸಿಗಳು ಪರದಾಡಿದ್ದಾರೆ.
ಸೋಮವಾರ ಬೆಳಗ್ಗೆ ಮಾರುತಿ ಸೇವಾನಗರದಲ್ಲಿ ಮರ ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಸೇರಿ ಆರು ಮಂದಿ ಗಾಯಗೊಂಡಿದ್ದು, ಅದೃಷ್ಠವಶಾತ್ ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಓರ್ವ ಸ್ಥಿತಿ ತುಸು ಗಂಭೀರವಾಗಿದೆ. ಹಲಸೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತವಾಗಿದ್ದು, ಎರಡು ಕಾರುಗಳು ಸಿಲುಕಿದ್ದವು. ಇದನ್ನು ಗಮನಿಸಿದ ಸ್ಥಳಿಯರು ತಕ್ಷಣ ಕಾರಿನಲ್ಲಿದ್ದ ಚಾಲಕರನ್ನು ರಕ್ಷಿಸಿದರು. ಓಕುಳಿಪುರ ಅಂಡರ್ಪಾಸ್ ಸಂಪೂರ್ಣ ಜಲಾವೃತಗೊಂಡ ಪರಿಣಾಮ ಹಾಸನದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದ ಆಂಬುಲೆನ್ಸ್ ಕೆಟ್ಟು ನಿಂತಿತ್ತು.ಆಂಬುಲೆನ್ಸ್ನಲ್ಲಿದ್ದ ರೋಗಿ ಕೆಲ ಕಾಲ ಪರದಾಡಿದರು. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗ ರಸ್ತೆ ನೀರಿನಲ್ಲಿ ಮುಳುಗಿತ್ತು. ಅಂದಾಜು 2 ಅಡಿಯಷ್ಟು ನೀರು ನಿಂತಿದ್ದ ಪರಿಣಾಮ ವಾಹನ ಸವಾರರು ಪರದಾಡಿದರು.
ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್ಪೇಟೆ, ಬಳೇಪೇಟೆ, ಕಾಟನ್ಪೇಟೆ, ವಿಜಯನಗರ, ಕಾಮಾಕ್ಷಿಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ.ನಗರ, ಮಲ್ಲೇಶ್ವರ, ಜೆ.ಸಿ.ರಸ್ತೆ ರಸ್ತೆಗಳು ಸೇರಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತವಾಯಿತು. ಸುಲ್ತಾನ್ಪೇಟೆ ಮುಖ್ಯರಸ್ತೆ ಅಕ್ಕಪಕ್ಕದ ಹತ್ತಾರು ಅಂಗಡಿಗಳಿಗೆ ನೀರು ನುಗ್ಗಿತ್ತು.ಬೆಳಗ್ಗೆ ಅಂಗಡಿ ಬಾಗಿಲು ತೆಗೆಯುವ ವೇಳೆ ಮಾಲೀಕರು ಗಾಬರಿಗೊಂಡರು. ಕೆಲ ವಸ್ತುಗಳು ಒದ್ದೆಯಾಗಿದ್ದವು. ಗೋವಿಂದರಾಜನಗರದಲ್ಲಿ ಕಾರಿನ ಮೇಲೆ ಮರ ಬಿದ್ದಿತ್ತು.ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಮಾರಕೃಪ ವೆಸ್ಟ್ ಸಮೀಪದ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮರ ಬಿದ್ದು ಕಾರು ಜಖಂಗೊಂಡಿದೆ.ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಸದಾಶಿವನಗರದಲ್ಲಿ ಬುಡ ಸಮೇತ ದೊಡ್ಡ ಮರವೊಂದು ಧಾರಾಶಾಹಿಯಾಗಿದೆ. ಜಯದೇವ ಆಸ್ಪತ್ರೆ ಅಂಡರ್ಪಾಸ್ನಲ್ಲಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಆಟೋ ಕೆಟ್ಟು ನಿಂತಿತ್ತು.ಸವಾರರು ಪ್ರಾಣಭಯದಲ್ಲೇ ನೀರಿನಲ್ಲೇ ವಾಹನ ಚಲಾಯಿಸಿದರು. ಎಚ್ಎಎಲ್ ಬಳಿ ಕಾಂಪೌಂಡ್ ಕುಸಿದ ಪರಿಣಾಮ ಅಪಾರ್ಟ್ಮೆಂಟ್ಗೆ ನೀರು ನುಗ್ಗಿತ್ತು. ಒಳಗಡೆ ನುಗ್ಗಿದ್ದ ನೀರನ್ನು ಮೋಟಾರ್ ಪಂಪ್ ಮೂಲಕ ಹೊರತೆಗೆಯಲಾಯಿತು.
ರಸ್ತೆಯಲ್ಲಿ ಮೀನುಗಳು:
ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಹಲವು ರಸ್ತೆಗಳು ಕೆರೆಯಂತಾಗಿತ್ತು. ಇದರಿಂದಾಗಿ ರಸ್ತೆಯಲ್ಲೇ ಮೀನು ಕಾಣಿಸಿಕೊಂಡವು. ಈ ವೇಳೆ ಮಹಿಳೆಯೊಬ್ಬರು ಮೀನು ಹಿಡಿಯುತ್ತಿದ್ದ ದೃಶ್ಯ ಕಂಡುಬಂತು. ಮಾರತ್ತಹಳ್ಳಿ ಬಳಿ ಅಪಾರ್ಟ್ಮೆಂಟ್ನ ತಳಮಹಡಿಗೆ, ಯಲಹಂಕದ ರಮಣಶ್ರೀ ಅಪಾರ್ಟ್ಮೆಂಟ್ಗೆ ರಾಜಕಾಲುವೆ ನೀರು ನುಗ್ಗಿತ್ತು. ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇಔಟ್ನಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಗೃಹೋಪಯೋಗಿ ವಸ್ತುಗಳು ಒದ್ದೆಯಾದವು. ಕೆಲ ರಸ್ತೆಗಳು ಕೆಸೆರುಗದ್ದೆಯಾಗಿ ಮಾರ್ಪಾಟ್ಟವು. ಪುಲಿಕೇಶಿನಗರದಲ್ಲಿ ಅಂದಾಜು 30 ಮನೆಗಳಿಗೆ ನೀರು ನುಗ್ಗಿದೆ. ಎನ್.ಸಿ.ಕಾಲನಿಯಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಕೆ.ಆರ್.ಮಾರುಕಟ್ಟೆಯಲ್ಲಿ ಹೂವಿನ ಮಂಡಿಗೆ ನೀರು ನುಗ್ಗಿತ್ತು. ನೀರಿನಲ್ಲೇ ಹೂವುಗಳು ಕೊಚ್ಚಿಕೊಂಡು ಹೋದವು. ಹೂವಿನ ವ್ಯಾಪಾರಿಗಳು ಕಂಗಾಲಾಗಿದ್ದರು.
ಕಾಲ್ನಡಿಗೆಯಲ್ಲೇ ಕಚೇರಿಗೆ.......
ನಗರದ ಬಹುತೇಕ ರಸ್ತೆಗಳು, ಅಂಡರ್ಪಾಸ್ಗಳು ಹೊಳೆಯಂತಾದ ಪರಿಣಾಮ ಕೆಲವರು ವಾಹನ ಬಿಟ್ಟು ಕಾಲ್ನಡಿಗೆಯಲ್ಲೇ ಸರ್ಕಾರಿ ಕಚೇರಿಗಳಿಗೆ ತೆರಳಿದರು.ಸಿಲ್ಕ್ ಬೋರ್ಡ್ ನೀರಿನಲ್ಲಿ ಮುಳುಗಿದ ಪರಿಣಾಮ ಅಂದಾಜು 2 ಗಂಟೆ ಕಾಲ ವಾಹನ ದಟ್ಟಾಣೆ ಉಂಟಾಯಿತು.ಐಟಿ&ಬಿಟಿ ಕಚೇರಿಗೆ ತೆರಳುವ ಉದ್ಯೋಗಿಗಳು ಪರಿತಪಿಸುವಂತಾಯಿತು. ಹೆಬ್ಬಾಳದ ಮೇಲ್ಸುತುವೆ, ಎಸ್ಟೀಂ ಮಾಲ್ನಿಂದ ಮೇಖ್ರಿ ವೃತ್ತದ ಕಡೆಗೆ ಒಳಬರುವ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಜತೆಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆಯಿಂದ ನೂರಾರು ಪ್ರಯಾಣಿಕರು ಪರದಾಡಿದರು. ಹಲವು ಕಡೆಗಳಲ್ಲಿ ಸಿಗ್ನಲ್ ಇಲ್ಲದ ಕಾರಣ ವಾಹನಗಳು ಏಕಾಏಕಿ ನುಗ್ಗಿದ್ದರಿಂದ ವಾಹನ ದಟ್ಟಾಣೆ ಉಂಟಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ಪೋಲಿಸರು ಪರದಾಟಿದರು.
ಐದು ದಿನ ಭಾರಿ ಮಳೆ
ಅರಬ್ಬಿ ಸಮುದ್ರದಲ್ಲಿ ತೇವಾಂಶ ಭರಿತ ಮೋಡಗಳು ಇರುವುದರಿಂದ ಮುಂದಿನ ಐದು ದಿನ ನಗರದಲ್ಲಿ ಬಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಆ.15ರಂದು ಆರೆಂಜ್ ಅರ್ಲಟ್ ಇದ್ದರೆ, ಆ.13, ಆ.14ರಂದು ಯೆಲ್ಲೋ ಅರ್ಲಟ್ ಇರಲಿದೆ. ಕೆಲವೊಂದು ಪ್ರದೇಶಗಳಲ್ಲಿ ಭಾರಿ ವರ್ಷಧಾರೆಯಾಗಲಿದೆ ಎಂದು ಎಂದು ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಏನೇನಾಯ್ತು?
* ದಾಸನಪುರ ಮಾರುಕಟ್ಟೆಗೆ ನುಗ್ಗಿದ್ದ ನೀರು
*ಲಾಂತರ ರೂ.ಮೌಲ್ಯದ ತರಕಾರಿ ನೀರು ಪಾಲು
*ಹಲವು ಅಪಾರ್ಟ್ಮೆಂಟ್ಗಳಿಗೆ ಜಲದಿಗ್ಬಂಧನ
* ವರ್ತೂರು ಬಳಿ ಸಿದ್ಧಾಪುರದ ಸರ್ಕಾರಿ ಪ್ರಾಥಮಿಕ ಶಾಲೆಗೆ ನುಗ್ಗಿದ ನೀರು
* ಮಳೆನೀರು ಆಚೆಗೆ ಹಾಕಲು ವಿದ್ಯಾರ್ಥಿಗಳು ಸಹಾಯ
* ಕೆರೆಯಂತಾದ ನಗರದ ಹಲವು ರಸ್ತೆಗಳು
* ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ
* ಬೆಳಕಿಲ್ಲದೆ ನಿವಾಸಿಗಳ ಪರದಾಟ
* ಬಹುತೇಕ ರಸ್ತೆಗಳಲ್ಲಿ ವಾಹನ ದಟ್ಟಣೆ
* ಆರ್ವಿಎಂ 2ನೇ ಹಂತದ ರೈಲ್ವೆ ಅಂಡರ್ಪಾಸ್ ಜಲಾವೃತ
* ಮಳೆ ನೀರು ಸಾರಾಗವಾಗಿ ಹರಿಯಲು ಪೊಲೀಸರಿಂದ ಕಸ, ಕಡ್ಡಿ ಸ್ವಚ್ಛ
*ಸಿಲ್ಕ್ಬೋಡ್ ಜಂಕ್ಷನ್ನಲ್ಲಿ 4 ಅಡಿವರೆಗೆ ನಿಂತ ನೀರು
* ನದಿಯಂತಾದ ವರ್ತೂರಿನ ಬಳಗೆರೆ ಮುಖ್ಯ ರಸ್ತೆ
* ಮಳೆಯಿಂದಾಗಿ ಬಿದ್ದ ರಸ್ತೆಗುಂಡಿಗಳಿಂದ ಸವಾರರ ಪ್ರಾಣಕ್ಕೆ ಕಂಟಕ