ಯುವ ಜನರಿಗೆ ದಾರ್ಶನಿಕರ ಅರಿವಿನ ಅಗತ್ಯವಿದೆ

11111111111111111
Published on

ಚಿತ್ರದುರ್ಗ:ದಾರ್ಶನಿಕರು,ಮಹನೀಯರ ಇತಿಹಾಸ ಹಾಗೂ ಅವರ ಆದರ್ಶಗಳ ತಿಳಿವಳಿಕೆ ಯುವ ಜನರಲ್ಲಿ ಅತ್ಯಗತ್ಯವಾಗಿರ ಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಆಯೋ ಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು,

ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯದವರಿಗೆ ನ್ಯಾಯ ಕೊಡಿಸಲು ಅನೇಕ ಮಹನೀಯರು ನಡೆಸಿದ ಹೋರಾಟ,ಅವರ ಸಿದ್ಧಾಂತ,ಮೌಲ್ಯಗಳನ್ನು ನೆನಪು ಮಾಡಿಕೊಂಡು ಅವರೆಲ್ಲರ ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಸರ್ಕಾರ ನಾನಾ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ.

ನಾರಾಯಣ ಗುರು ಅವರು ಕೇರಳದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದಂಥ ಮಹಾತ್ಮ. ಜಾತಿ ವ್ಯವಸ್ಥೆ ತೊಲಗಿಸಬೇಕೆನ್ನುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದ ಮಹಾನ್ ದಾರ್ಶನಿಕರೆಂದರು. ಎಡಿಸಿಇ.ಬಾಲಕೃಷ್ಣ ಮಾತನಾಡಿ,ಸ್ವತಂತ್ರ ಪೂರ್ವದಲ್ಲಿ ದೇಶದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಾರಾಯಣ ಗುರು ಶ್ರಮಿಸಿದ್ದಾರೆ.

ಸಮಾನತೆ, ನಾಗರಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು. ಅವರ ತತ್ವಾದರ್ಶಗಳ ಪಾಲನೆ ಮತ್ತು ಸಂವಿಧಾನ ಕೊಟ್ಟಿರುವ ಮೂಲ ಹಕ್ಕು ಗಳೊಂದಿಗೆ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಜಾತಿ ವ್ಯವಸ್ಥೆ ತೊಲಗಿ ಸಮಾನತೆ ಬದುಕು ನಮ್ಮದಾಗ ಬೇಕಿದೆ ಎಂದರು.

ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೀವನ್ ಮಾತನಾಡಿ,ಶಿಕ್ಷಣದಿಂದ ಮಾತ್ರ ಸಮುದಾಯ ಅಭಿವೃದ್ಧಿ ಸಾಧ್ಯ. ನಾರಾಯಣ ಗುರು ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರೊಂದಿಗೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದರೆಂದರು. ಉಪನ್ಯಾಸ ನೀಡಿದ ಶಿಕ್ಷಕ ಕೃಷ್ಣಮೂರ್ತಿ,ಭಗವಂತನಿಗೆ ಎಲ್ಲರೂ ಒಂದೇ,ಅದೇ ನಂಬಿಕೆ ನಾರಾಯಣ ಗುರುಗಳಲ್ಲೂ ಇತ್ತು. ಚಿಕ್ಕ ವಯಸ್ಸಿನಿಂದಲೇ ಶಿಕ್ಷಣದಲ್ಲಿ ಪಾಂಡಿತ್ಯ ಪಡೆದು ಜೊತೆಗೆ ಆಯುರ್ವೇದ ಚಿಕಿತ್ಸೆಯನ್ನೂ ಕಲಿತಿದ್ದರು. ದೇಶದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಲಗಿಸುವ ನಿಟ್ಟಿನಲ್ಲಿ ಎಲ್ಲರೂ ಸಮಾನರು ಎನ್ನುವ ಸಾರಾಂಶ ಜನರಿಗೆ ತಿಳಿಸುವ ಕಾಯಕದಲ್ಲಿ ತೊಡಗಿದ್ದರು. ಮೇಲು ಕೀಳು ಎಂಬುದಿಲ್ಲವೆಂಬ ಸಂದೇಶ ಸಾರುತ್ತ ಜನರನ್ನು ಸಂಘಟಿಸಿದ್ದರೆಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ನಗರಸಭಾ ಸದಸ್ಯೆ ಅನುರಾಧ ರವಿಕುಮಾರ್,ಆರ್ಯ ಈಡಿಗ ಸಮಾಜದ ಜಿಲ್ಲಾ ಉಪಾಧ್ಯಕ್ಷ ಡಿ. ಸ್ವಾಮಿ,ಜಿಲ್ಲಾ ಕಾರ್ಯದರ್ಶಿ ಟಿ.ಮಂಜುನಾಥ,ಯುವ ಘಟಕ ವೇದಿಕೆ ಜಿಲ್ಲಾಧ್ಯಕ್ಷ ಎಸ್.ವೆಂಕಟೇಶ್ ಹಾಗೂ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net