ನಾಳೆ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ: ಧಾರ್ಮಿಕ ಕಾರ್ಯಕ್ರಮಕ್ಕೆ ಕ್ಷೇತ್ರ ಸಜ್ಜು

SRP _26-02jpg
Published on

ಶ್ರೀರಂಗಪಟ್ಟಣ: ಇಲ್ಲಿನ ಐತಿಹಾಸಿಕ ಕ್ಷೇತ್ರಪಾಲಕ ಶ್ರೀರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಜ.28ರಂದು ವಿಜೃಂಭಣೆಯಿಂದ ನೆರವೇರಲಿದೆ.

ಜ.27ರಂದು ಸಂಜೆಯಿಂದಲೇ ಶ್ರೀ ಆದಿಶೇಷ ಸ್ವರೂಪಿ ವಿಷ್ಣುವಿಗೆ ವಿಶೇಷ ಹೋಮ, ಪೂಜೆ ಪುಣ್ಯಾಲಂಕಾರಗಳು ನೆರವೇರಲಿದ್ದು, ರಾತ್ರಿ ದೇಗುಲದ ಮುಂದಿನ ಕಲ್ಯಾಣಿಯಲ್ಲಿ ಗಜೇಂದ್ರಮೋಕ್ಷ ಪೂಜಾ ಕಾರ್ಯ ನೆರವೇರಿಸಿ ಸಿಡಿಮದ್ದು ಸಿಡಿಸಲಾಗುತ್ತದೆ.

28ರಂದು ದೇವಾಲಯದಲ್ಲಿ ಶ್ರೀ ಆದಿರಂಗನಿಗೆ ವಿಶೇಷ ಪೂಜೆಗಳು ಹಾಗೂ ಅಲಂಕಾರ ಮುಂಜಾನೆ 4ರಿಂದಲೇ ಆರಂಭವಾಗಲಿದ್ದು, ಬೆಳಗ್ಗೆ 6.30ಕ್ಕೆ ಸೂರ್ಯಮಂಡಲ ಹಾಗೂ ಚಂದ್ರಮಂಡಲ ರಥಗಳು ಪಟ್ಟಣ ಚತುರ್ಥ ರಾಜಬೀದಿಗಳಲ್ಲಿ ಸಂಚರಿಸಲಿದ್ದು, ಪುರಜನರಿಂದ ವಿಶೇಷವಾಗಿ ಪೂಜೆಗೆ ಒಳಗಾಗಲಿದೆ. ಬಳಿಕ ಮಧ್ಯಾಹ್ನ 1.30ಕ್ಕೆ ಸಲ್ಲುವ ಶುಭಲಗ್ನದಲ್ಲಿ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಶ್ರೀರಂಗನಾಥಸ್ವಾಮಿಯ ಪಂಚಲೋಹದ ವಿಶೇಷ ಉತ್ಸವ ಮೂರ್ತಿಯನ್ನು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ತೇರನ್ನು ದೇವಾಲಯದ ಸುತ್ತಲು ಎಳೆಯಲಾಗುವುದು ಎಂದು ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net