ಮೆದುಳು ಚಿಕಿತ್ಸೆ ಸೌಲಭ್ಯ

Published on

ಬಳ್ಳಾರಿ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮೆದುಳು ಆರೋಗ್ಯ ಸಂಬಂಧಿಸಿದ ಕಾಯಿಲೆಗಳಿಗೆ ತಜ್ಞರಿಂದ ಸೌಲಭ್ಯವಿದ್ದು, ಇದರ ಸದುಪಯೋಗವಾಗಬೇಕು ಎಂದು ಡಿಎಚ್ಒ ಡಾ.ವೈ. ರಮೇಶ್ ಬಾಬು ಹೇಳಿದರು.

ನಗರದ ಡಿಎಚ್ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ ಸಹಯೋಗದೊಂದಿಗೆ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಫಾರ್ಮಸಿ ಅಧಿಕಾರಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮೆದುಳು ಮತ್ತು ನರ ಸಮಸ್ಯೆಗಳಿಗೆ ಜನತೆಯು ಸಾಮಾನ್ಯವಾಗಿ ಬಿಮ್ಸ್ ತಪ್ಪಿದರೆ ಬೆಂಗಳೂರು ಮತ್ತು ಧಾರವಾಡಕ್ಕೆ ತೆರಳುತ್ತಾರೆ. ಇದನ್ನು ತಪ್ಪಿಸಲು ಜಿಲ್ಲಾ ಆಸ್ಪತ್ರೆಯಲ್ಲಿಯೇ ತಜ್ಞರ ಸೌಲಭ್ಯವನ್ನು ಒದಗಿಸಿರುವುದರಿಂದ ಜನತೆಗೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕ್ಷೇತ್ರ ಮಟ್ಟದಲ್ಲಿ ನೀಡಬೇಕು. ಅನಗತ್ಯ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಕುಟುಂಬದ ಸದಸ್ಯರ ನೆಮ್ಮದಿಯ ಜೀವನಕ್ಕೆ ಕ್ಷೇತ್ರ ಮಟ್ಟದಲ್ಲಿ ಜಾಗೃತಿಗೊಳಿಸಬೇಕು ಎಂದು ತಿಳಿಸಿದರು.

ರಾಷ್ಟ್ರದ ಹೆಸರಾಂತ ಮನೋ ಆರೈಕೆ ಕೇಂದ್ರವಾಗಿರುವ ನಿಮಾನ್ಸ್ ಸಹಯೋಗ ಮತ್ತು ಸಲಹೆಗಳೊಂದಿಗೆ ನರರೋಗ ತಜ್ಞರ ಉಪಸ್ಥಿತಿಯಲ್ಲಿ ಮೆದುಳು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಆಪ್ತಸಮಾಲೋಚನೆ ನಡೆಸಲಾಗುವುದು. ಮುಖ್ಯವಾಗಿ ಪಾರ್ಶ್ವವಾಯು, ಅಪಸ್ಮಾರ, ಮರೆವು ಕಾಯಿಲೆ ಮತ್ತು ತಲೆನೋವು ಸೇರಿದಂತೆ ನರ ವೈಜ್ಞಾನಿಕ ಕಾಯಿಲೆಗಳಿಂದ ಬಳಲುತ್ತಿರುವವರು ಆರಂಭಿಕ ಹಂತದಲ್ಲಿಯೇ ತಜ್ಞರನ್ನು ಸಂಪರ್ಕಿಸುವ ಮೂಲಕ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಟಾನ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲಾ ಶಸ್ತ್ರಚಿಕಿತ್ಸಕರ ಅಧೀನದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮೆದುಳು ಆರೋಗ್ಯ ವಿಭಾಗ ಆರಂಭಿಸಲಾಗಿದ್ದು, ವೈದ್ಯರು ಫಿಜಿಯೋಥೆರಫಿಸ್ಟ್, ಸ್ಪೀಚ್‌ಥೆರಫಿಸ್ಟ್, ಮನೋ ಶಾಸ್ತçಜ್ಞರು ಹಾಗೂ ಶುಶ್ರೂಷಣಾಧಿಕಾರಿ ಒಳಗೊಂಡ ವೈದ್ಯಕೀಯ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದರು.

ಮಾನಸಿಕ ಆರೋಗ್ಯ ಸಮಸ್ಯೆಗಳು ಕಂಡುಬರುವಂತಹವವರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮನೋ ತಜ್ಞರ ಮೂಲಕ ಎಲ್ಲ ತಾಲೂಕುಗಳಲ್ಲಿ ಪ್ರತಿ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮವನ್ನು ಸಾರ್ವಜನಿಕ ಆಸ್ಪತ್ರೆ ಹಾಗೂ ಕಂಪ್ಲಿ, ಕುರುಗೋಡು, ಮೋಕಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯು ಸಹ ಶಿಬಿರಗಳನ್ನು ಏರ್ಪಡಿಸಿ ಸ್ಥಳದಲ್ಲಿಯೇ ತಪಾಸಣೆ, ಆಪ್ತಸಮಾಲೋಚನೆ ಹಾಗೂ ಔಷದೋಪಚಾರ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆಯುವ ಮೂಲಕ ಆರಂಭದಲ್ಲಿಯೇ ಮಾನಸಿಕ ಆರೋಗ್ಯ ಗುಣಪಡಿಸಲು ಜನತೆಗೆ ಜಾಗೃತಿ ನೀಡಲು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net