

ಕಾರವಾರ: ವರ್ಷದ ಹಿಂದಷ್ಟೇ ಬೆಂಗಳೂರಿನ ನಿಮ್ಹಾನ್ಸ್ ಸಹಯೋಗದೊಂದಿಗೆ ಎಲ್ಲ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾರಂಭವಾಗಿದ್ದ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಬ್ರೇನ್ ಹೆಲ್ತ್ ಕ್ಲೀನಿಕ್) ತಜ್ಞರು, ನೌಕರರ ವೇತನವನ್ನು ಕಡಿತ ಮಾಡಿದ್ದು, ನೌಕರರು ಕಂಗಾಲಾಗಿದ್ದಾರೆ. ಬ್ರೇನ್ ಹೆಲ್ತ್ ಕ್ಲೀನಿಕ್ ನಡೆಸುವ ಜವಾಬ್ದಾರಿಯನ್ನು ನಿಮ್ಹಾನ್ಸ್ನಿಂದ ವಾಪಸ್ ಪಡೆದು ಆರೋಗ್ಯ ಇಲಾಖೆ ಸ್ವತಃ ವಹಿಸಿಕೊಳ್ಳಲು ಈ ವರ್ಷ ಸೂಚನೆ ನೀಡಲಾಗಿದೆ. ಹೊಸ ಸುತ್ತೋಲೆಯಂತೆ ಈಗಾಗಲೇ ನೇಮಕವಾಗಿರುವ ತಜ್ಞರ ವೇತನವನ್ನು 10 ರಿಂದ 15 ಸಾವಿರ ರೂ.ವರೆಗೆ ಕಡಿತ ಮಾಡಲಾಗಿದೆ. ಇದರಿಂದ ಹಲವರು ಉದ್ಯೋಗ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಸಂಬಂಧಪಟ್ಟ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಸಮಿತಿಯೊಂದನ್ನು ಮಾಡಲಾಗಿದ್ದು, ಅವರು ಬ್ರೇನ್ ಹೆಲ್ತ್ ಕ್ಲೀನಿಕ್‌ನ ನೇಮಕಾತಿ ಹಾಗೂ ನಿರ್ವಹಣೆಯ ಜವಾಬ್ದಾರಿ ವಹಿಸಬೇಕಿದೆ. ಈ ಹಿಂದೆ 40 ಸಾವಿರ ರೂ. ಇದ್ದ ಫಿಜಿಯೋ ಥೆರಫಿಸ್ಟ್ ವೇತನವನ್ನು ಈಗ 25 ಸಾವಿರ ರೂ.ಗೆ ಇಳಿಸಲಾಗಿದೆ. ಈ ಹಿಂದೆ ಜಿಲ್ಲಾ ಸಂಯೋಜಕರಿಗೆ 35 ಸಾವಿರ ರೂ. ವೇತನ ನಿಗದಿ ಮಾಡಲಾಗಿತ್ತು. ಹೊಸ ಸುತ್ತೋಲೆಯಂತೆ ಅವರ ವೇತನವನ್ನು 25 ಸಾವಿರ ರೂ.ಗೆ ಇಳಿಸಲಾಗಿದೆ. ಇದೇ ರೀತಿ ಇತರರ ವೇತನವನ್ನೂ ಕಡಿತ ಮಾಡಿ ಏ.17 ರಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ಸರ್ಕಾರ 2022 ರಲ್ಲಿ ಕರ್ಣಾಟಕ ಮೆದುಳು ಆರೋಗ್ಯ ಉಪಕ್ರಮ ಜಾರಿಗೊಳಿಸಿತ್ತು. 2023 ರ ಡಿಸೆಂಬರ್‌ನಿAದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಬ್ರೇನ್ ಹೆಲ್ತ್ ಕ್ಲೀನಿಕ್ ಆರಂಭಿಸಿ.ಅದರ ನಿರ್ವಹಣೆಯನ್ನು ನಿಮ್ಹಾನ್ಸ್ಗೆ ವಹಿಸಲಾಗಿತ್ತು. ನರಸಂಬಂಧಿಸಿ ಕಾಯಿಲೆಗಳಾದ ಪಾರ್ಶ್ವವಾಯು, ಮೂರ್ಛೆ, ತಲೆನೋವು ಮತ್ತು ಡಿಮೆನ್ಶಿಯಾಗಳಿಗೆ ಚಿಕಿತ್ಸೆ ನೀಡುವುದು ಈ ಕ್ಲೀನಿಕ್ ಉದ್ದೇಶವಾಗಿತ್ತು. ಪ್ರತಿ ಕ್ಲಿನಿಕ್ ಗೆ ಒಬ್ಬ ನ್ಯೂರೋಲಜಿಸ್ಟ್, ಫಿಸಿಯೋಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್, ಸೈಕಾಲಜಿಸ್ಟ್, ನರ್ಸ್ ಹಾಗೂ ಮೇಲ್ವಿಚಾರಣಾ ಜವಾಬ್ದಾರಿಗೆ ಜಿಲ್ಲಾ ಸಂಯೋಜಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು.
ಈ ಹೆಲ್ತ್ ಕ್ಲೀನಿಕ್‌ಗಳ ಮೂಲಕ ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ 3 ಲಕ್ಷ ಜನರ ಸ್ಕ್ರೀನಿಂಗ್, 25000ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ಮತ್ತು ರಾಜ್ಯದ ಎಲ್ಲ ಜಿಲ್ಲೆಯ ಆಶಾ, ಸಮುದಾಯ ಆರೋಗ್ಯ ಅಽಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಉತ್ತರ ಕನ್ನಡ ಕ್ರಿಮ್ಸ್ ಅಡಿ ಇರುವ ಜಿಲ್ಲಾ ಆಸ್ಪತ್ರೆಯಲ್ಲೂ ಈ ಕ್ಲೀನಿಕ್ ಪ್ರಾರಂಭವಾಗಿತ್ತು. ಆದರೆ, ಇಲ್ಲಿ ನ್ಯೂರೋ ಸರ್ಜನ್ ನೇಮಕವಾಗಿರಲಿಲ್ಲ.
ಇಲ್ಲಿನ ವೇತನ ನಂಬಿ ನಾವು ಮೊದಲು ಇರುವ ಕೆಲಸವನ್ನು ಬಿಟ್ಟು ಬಂದಿದ್ದೇವೆ. ವೇತನ ಏರಿಕೆಯಾಗುವುದು ಸಾಮಾನ್ಯ ಆದರೆ, ಇದ್ದಕ್ಕಿದ್ದಂತೆ 10 ಸಾವಿರ ವೇತನ ಕಡಿತ ಮಾಡುವ ಸೂಚನೆ ಸಿಕ್ಕಿದೆ. ನಾವು ಏನು ಮಾಡಬೇಕು ತಿಳಿಯದಾಗಿದೆ. ಹೆಸರು ಹೇಳಲಿಚ್ಛಿಸದ ಜಿಲ್ಲಾ ಸಂಯೋಜಕ ಬ್ರೇನ್ ಹೆಲ್ತ್ ಕ್ಲೀನಿಕ್
ವೈದ್ಯಕೀಯ ಅಧೀಕ್ಷಕ, ಕ್ರಿಮ್ಸ್, ಕಾರವಾರ ಡಾ.ಶಿವಾನಂದ ಕುಡ್ತಲಕರ್ ಬ್ರೇನ್ ಹೆಲ್ತ್ ಕ್ಲೀನಿಕ್ ಎಂಬುದು ನಿಮ್ಹಾನ್ಸ್ ಸಹಯೋಗದಲ್ಲಿ ಜಾರಿಯಾಗಿರುವ ಸರ್ಕಾರದ ಒಂದು ಕಾರ್ಯಕ್ರಮವಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಅದಕ್ಕೆ ಜಾಗ ಒದಗಿಸಲಾಗಿದೆ. ಸಿಬ್ಬಂದಿ ನೇಮಕ, ನಿರ್ವಹಣೆ ಎಲ್ಲವೂ ಅಲ್ಲಿಂದಲೇ ನಡೆಯುತ್ತದೆ. ಸರ್ಕಾರ ವಹಿಸಿಕೊಂಡು ವೇತನ ಕಡಿತ ಮಾಡಿದ ಬಗ್ಗೆ ಯಾವುದೇ ಮಾಹಿತಿ ನಮ್ಮ ವ್ಯಾಪ್ತಿಗೆ ಬಾರದು.