ಮಕ್ಕಳಿಗೆ ಮಿದುಳು ಜ್ವರದ ಜಾಗೃತಿ ಮೂಡಿಸಿ: ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ್ ಸೂಚನೆ

Brain Fever Control Meeting mandya
Published on

ಮಂಡ್ಯ: ಮಿದುಳು ಜ್ವರವು 1 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಜ್ವರ ಹಾಗೂ ನಿಯಂತ್ರಣದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಎಂದು ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ್ ಸೂಚನೆ ನೀಡಿದರು.

ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಿದುಳು ಜ್ವರದ ಬಗ್ಗೆ ಶಾಲೆಯ ಪ್ರಾರ್ಥನೆ ಸಂದರ್ಭ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಿ. ಈ ಮೂಲಕ ಜ್ವರ ನಿಯಂತ್ರಿಸುವಲ್ಲಿ ಸಹಕರಿಸಿ ಎಂದು ಮನವಿ ಮಾಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚಾಗಿ ನಿಗಾವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಸುಚಿತ್ವ ಕಾಪಾಡಿಕೊಳ್ಳಿ. ಜ್ವರದ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಗ್ರಾಮಗಳಲ್ಲಿ ಅರಿವು ಮೂಡಿಸುವ ಕೆಲಸವಾಗಲಿ. ಅಂಗನವಾಡಿ ಹಾಗೂ ಶಾಲೆಗಳಿಗೆ ತೆರಳಿ ಉಚಿತವಾಗಿ ಚುಚ್ಚುಮದ್ದು ನೀಡುತ್ತಿದ್ದೇವೆ. ಮಿಮ್ಸ್ ಆಸ್ಪತ್ರೆಯಲ್ಲೂ ಚುಚ್ಚುಮದ್ದು ಲಭ್ಯವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪ್ರತಿ ಗುರುವಾರ ಚುಚ್ಚುಮದ್ದು ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ಸಾರ್ವಜನಿಕರು ಹೊರ ದೇಶ ಹಾಗೂ ರಾಜ್ಯಗಳಿಗೆ ಪ್ರವಾಸ ಹೋಗಿ ಬಂದಾಗ ಕೋವಿಡ್ ಲಕ್ಷಣಗಳು ಇದ್ದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಶಾಲಾ ಕಾಲೇಜುಗಳಲ್ಲಿ ಕೋವಿಡ್ ನಿಯಮಪಾಲಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ, ಸಿಡಿಪಿಒ ಕುಮಾರಸ್ವಾಮಿ, ತಾಪಂ ಅಧಿಕಾರಿ ಶ್ರೀನಿವಾಸ್, ಬಿಇಒ ಸೌಭಾಗ್ಯ, ಶಶಿಧರ್, ತಿಮ್ಮರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net