

ಕೊಪ್ಪ: ಹರಿಹರಪುರ ಶ್ರೀಮಠದಲ್ಲಿ ಏ.8 ರಿಂದ 12ರವರೆಗೆ ಬ್ರಹ್ಮೋತ್ಸವ, ಧಾರ್ಮಿಕ, ಸಂಸ್ಕೃತಿ ಕಾರ್ಯಕ್ರಮಗಳ ಜತೆಗೆ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್.ರಾಮಸ್ವಾಮಿ ಹೇಳಿದರು.
ಶ್ರೀಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಐದು ದಿನ ಬೆಳಗ್ಗೆ ಧಾರ್ಮಿಕ ಹಾಗೂ ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸ್ಥಳೀಯ ಮಹಿಳೆಯರಿಂದ ಪಾರಾಯಣ ನಡೆಯಲಿದೆ. ಈ ಬಾರಿ ವಿಶೇಷವಾಗಿ ಐದು ದಿನ ಕೃಷಿ ಮೇಳ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಭಾಗದಿಂದ ರೈತರು ಭಾಗವಹಿಸಲಿದ್ದಾರೆ. ವೇಳದಲ್ಲಿ ಕೃಷಿಗೆ ಸಂಬಂಧಿಸಿದ ವಸ್ತುಗಳ ಪ್ರರ್ದಶನ ಹಾಗೂ ಮಾರಾಟ ನಡೆಯಲಿದೆ ಎಂದು ತಿಳಿಸಿದರು.
ಏ.8 ರಿಂದ 11ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಶ್ರೀ ಬಸವರಮಾನಂದ ಸ್ವಾಮೀಜಿ, ಶಕಠಪುರದ ವಿದ್ಯಾಭಿನವ ಶ್ರೀಕೃಷ್ಣಾನಂದತೀರ್ಥ ಸ್ವಾಮೀಜಿ, ಕಾಸರಗೋಡಿನ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ವಿಜಯವಾಡದ ಶ್ರೀ ಕಮಲಾನಂದ ಭಾರತೀ ಸ್ವಾಮೀಜಿ, ದೇವರಚೆರುವಿನ ಶ್ರೀ ಮಾತಂಗಾನಂದ ಗಿರಿ ಸ್ವಾಮೀಜಿ, ಹಂಗಾರಕಟ್ಟೆಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಸ್ವಾಮಿ ಸಂಸ್ಥಾನ ಮಠದ ಶ್ರೀಕಲ್ಯಾಣ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಏ.12 ರಂದು ಬೆಳಗ್ಗೆ 7 ಗಂಟೆಗೆ ಸರಿಯಾಗಿ ಹನುಮಜಯಂತಿ ಅಂಗವಾಗಿ ಶ್ರೀ ಭಕ್ತಾಂಜನೇಯ ಸ್ವಾಮಿಗೆ ಮಹಾಭಿಷೇಕ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ಜಯೇಂದ್ರಪುರಿ ಶ್ರೀಗಳು, ಸೋಲೂರಿನ ಶ್ರೀವಿಖ್ಯಾತಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ. ಅಂದು ಸಂಜೆ 5.30ಕ್ಕೆ ದೇವರಿಗೆ ಕಲ್ಯಾಣೋತ್ಸವ, 6ಗಂಟೆಗೆ ಶ್ರೀಲಕ್ಷ್ಮೀನರಸಿಂಹ ಸ್ವಾಮಿಗೆ ಮಹಾರಥೋತ್ಸವ, ಸಂಜೆ 7 ಗಂಟೆಗೆ ದೀಪೋತ್ಸವ ಹಾಗೂ ತೆಪ್ಪೋತ್ಸವ ನಡೆಯಲಿದೆ ಎಂದು ತಿಳಿಸಿದರು.