ಬ್ರಾಹ್ಮಣರು ಸಂಘಟಿತರಾಗಲಿ

18 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬ್ರಾಹ್ಮಣರು ಸಂಘಟಿತರಾಗದೆ ಚದುರಿ ಹೋಗಿರುವ ಕಾರಣಕ್ಕೆ ಅವರಿಗೆ ಎಲ್ಲ ರಂಗಗಳಲ್ಲೂ ಮನ್ನಣೆ ದೊರಕುತ್ತಿಲ್ಲ. ಹೀಗಾಗಿ ಬ್ರಾಹ್ಮಣರು ಸಂಘಟಿತರಾಗುವುದು ಅನಿವಾರ್ಯ ಎಂದು ಸೋನಿಯಾ ಎಜುಕೇಶನ್​ ಟ್ರಸ್ಟ್​ ಮುಖ್ಯಸ್ಥ ಹನುಮಂತ ಡಂಬಳ ಅಭಿಪ್ರಾಯಪಟ್ಟರು.
ನಗರದ ಮದಿಹಾಳದ ಜೋಶಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ಚಿದಂಬರ ಸೇವಾ ಸಮಿತಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಧಾರ್ಮಿಕ ಸಂಸ್ಥೆಗಳು, ಮಠ, ಮಂದಿರಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತಗೊಳ್ಳದೆ ತಮ್ಮ ಕಾರ್ಯ ಬಾಹುಳ್ಯ ವಿಸ್ತರಿಸಿ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕ್ಷೇತ್ರಗಳನ್ನು ಸ್ಥಾಪಿಸಿ ತಮ್ಮ ಸಮಾಜ ಬಾಂಧವರಿಗೆ ನೆರವಾಗಬೇಕು. ನಗರದ ಸಂಸ್ಕೃತ ಪಾಠಶಾಲೆ ಮತ್ತು ಚಿದಂಬರ ಸೇವಾ ಸಮಿತಿಗಳು ಎರಡು ಕಣ್ಣುಗಳಿದ್ದಂತೆ. ಇವೆರಡೂ ಸಂಸ್ಥೆಗಳು ಸಮಾಜದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತ ಇತರ ಸಂಸ್ಥೆಗಳಿಗೆ ಮಾದರಿಯಾಗಿವೆ. ಧಾರವಾಡದಲ್ಲಿ ವೇದ ಅಧ್ಯಯನ ಪೀಠದ ಸ್ಥಾಪನೆಗೆ ಮುಂದಾಗಬೇಕು ಎಂದರು.
ಬ್ರಾಹ್ಮಣ ಸಮುದಾಯದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಬ್ರಾಹ್ಮಣರು ಸಂಘಟಿತರಾದರೆ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರವಾಗುತ್ತವೆ. ಈ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಮುತುವರ್ಜಿಯಿ೦ದ ಕೈಗೊಂಡು ಯಶಸ್ವಿಗೊಳಿಸಬೇಕು ಎಂದರು.
ಕಾಂಗ್ರೆಸ್​ ಮುಖಂಡ ದೀಪಕ ಚಿಂಚೋರೆ ಮಾತನಾಡಿ, ಬ್ರಾಹ್ಮಣರು ಸಂಘಟಿತರಾದಾಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ. ಸಮಾಜದ ಬಗ್ಗೆ ಯಾರಾದರೂ ಅವಹೇಳನವಾಗಿ ಮಾತನಾಡಿದರೆ ಕೇಳುವವರೇ ಇಲ್ಲದಂತಾಗಿದೆ. ನಮ್ಮ ಸಂಪ್ರದಾಯ, ಸಂಸ್ಕೃತಿ ಬಗ್ಗೆ ಮಾತನಾಡುವವರು ಹೆಚ್ಚಾಗಿದ್ದಾರೆ. ಚುನಾವಣೆಗಳಲ್ಲಿ ನಮ್ಮ ಸಮಾಜಕ್ಕೆ ಒಳಿತು ಮಾಡುವವರಿಗೆ ಆದ್ಯತೆ ನೀಡಬೇಕು. ಅಂದಾಗಲೇ ಸಮಸ್ಯೆಗಳಿಗೆ ಸರಳ ಪರಿಹಾರ ಸಿಗಲಿದೆ ಎಂದರು.
ಸವದತ್ತಿ ರಾಜಾರಾಮ ಮಠದ ಗಂಗಾಧರ ದೀಕ್ಷಿತ ಸಾನ್ನಿಧ್ಯ ವಹಿಸಿದ್ದರು. ಬ್ರಹ್ಮಶ್ರೀ ರಾಜೇಶ್ವರ ಶಾಸ್ತ್ರಿ, ಸತ್ಯನಾರಾಯಣಾಚಾರ್ಯ, ರವಿ ದೇಶಪಾಂಡೆ, ಅರವಿಂದ ಕುಲಕರ್ಣಿ, ದತ್ತಮೂರ್ತಿ ಕುಲಕರ್ಣಿ, ಅಶೋಕ ಸವಡಿ, ಜಿ.ಕೆ. ಕುಲಕರ್ಣಿ, ಅನುರಾಧಾ ಕುಲಕರ್ಣಿ, ಹನಮಂತ ಭಟ್ಟ ಠಕ್ಕಳಕಿ, ಶ್ರೀಧರ ಕುಲಕರ್ಣಿ, ಇತರರು ಇದ್ದರು.
ಡಾ. ವಿ.ಎಚ್​. ಕುಲಕರ್ಣಿ ಸ್ವಾಗತಿಸಿದರು. ಚಿದಂಬರ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುವರ್ಣಾ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net