

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬ್ರಾಹ್ಮಣ ಸಮಾಜವು ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಒಳಗೊಳ್ಳುವಿಕೆಯ ಮೇಲೆ ಗಮನ ಕೇಂದ್ರೀಕರಿಸಿ ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಬೇಕು ಎಂದು ಗುಜ್ಜಾಡಿ ಸ್ವರ್ಣ ಜುವೆಲರ್ಸ್ ಪ್ರೖೆವೇಟ್ ಲಿಮಿಟೆಡ್ನ ಗೋಪಾಲಕೃಷ್ಣ ನಾಯಕ ಗುಜ್ಜಾಡಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಜಿನೆಸ್ ಬೈ ಬ್ರಾಹ್ಮಿನ್ಸ್ (ಬಿಬಿಬಿ) ವೇದಿಕೆಯ ನೃಪತುಂಗ ಹುಬ್ಬಳ್ಳಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಇಂಥದೊಂದು ವೇದಿಕೆಯ ಅಗತ್ಯ ಬಹಳ ಹಿಂದಿನಿಂದಲೂ ಇತ್ತು. ಈಗ ಇದರ ರಚನೆಗೆ ಕಾರಣರಾದವರನ್ನು ನಾವು ಅಭಿನಂದಿಸುತ್ತೇವೆ ಎಂದರು.
ಬ್ರಾಹ್ಮಣ ಸಮುದಾಯ ಗೊಂದಲಮಯ ಸ್ಥಿತಿಯಲ್ಲಿದೆ. ನಾವು ನಮ್ಮನ್ನು ಮರುವ್ಯಾಖ್ಯಾನಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬಿಬಿಬಿ ಖಂಡಿತ ನೆರವಾಗಲಿದೆ. ಕರ್ಮ ಎಂಬುದು ಕೇವಲ ನಾವು ಮಾಡುವ ವೃತ್ತಿಯಲ್ಲ, ಕರ್ಮವು ನಾವು ಮಾಡುವ ಎಲ್ಲ ಚಟುವಟಿಕೆಯನ್ನು ಪ್ರಭಾವಿಸುತ್ತದೆ ಎಂದು ಹೇಳಿದರು.
ದೇಸಾಯಿ ಆಂಡ್ ಕಂಪನಿ ಎಂಡಿ ಅನಿಲ ದೇಸಾಯಿ ಮಾತನಾಡಿ, ವ್ಯಾಪಾರ-ವಹಿವಾಟಿನಲ್ಲಿ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುವಲ್ಲಿ ಸಮಾಜದ ಯುವ ಪೀಳಿಗೆಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇಂಥ ವೇದಿಕೆಗಳು ಸಹಾಯವಾಗಲಿದೆ. ಸಮಾಜಕ್ಕೆ ನೀಡಿದ್ದನ್ನು ಹಾಗೂ ದಾನ ಮಾಡಿದ್ದನ್ನು ಪ್ರಚಾರ ಪಡೆಯಲು ಹೋಗಬಾರದು ಎಂದರು.
ಬಿಬಿಬಿ ನೃಪತುಂಗ ಹುಬ್ಬಳ್ಳಿ ಶಾಖೆಯ ನಿರ್ದೇಶಕರಾಗಿ ಶ್ರೀಕಾಂತ ದೇಶಪಾಂಡೆ, ಅಧ್ಯಕ್ಷೆಯಾಗಿ ಲಕ್ಷ್ಮೀ ಕುಲಕರ್ಣಿ, ಕಾರ್ಯದರ್ಶಿಯಾಗಿ ಅಭಿಜೀತ ಲಿಮಯೇ ಹಾಗೂ ಖಜಾಂಚಿಯಾಗಿ ಮಂಜುನಾಥ ಕಾರ್ಕಳ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಬಿಬಿಬಿ ಪ್ರಾದೇಶಿಕ ನಿರ್ದೇಶಕಿ ಶಿಲ್ಪಾ ಪ್ರಸಾದ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಿಬಿಬಿ ಕಾರ್ಯಕಾರಿ ಸಮಿತಿ ಚೇರ್ಮನ್ ಪ್ರಭಾಕರ ರಾವ್, ಸಂಸ್ಥಾಪಕ ಟ್ರಸ್ಟಿ ಅನಂತ ನಾಗರಾಜ, ರಾಮಕೃಷ್ಣನ್ ಎಸ್. ಮಾತನಾಡಿದರು. ಅನನ್ಯಾ ಲಿಮಯೇ ಪ್ರಾರ್ಥನೆ ಹಾಡಿದರು. ಅಭಿಜೀತ ಲಿಮಯೇ ಸ್ವಾಗತಿಸಿದರು. ಶ್ರೀಕಾಂತ ಸುಬ್ಬಣ್ಣವರ ಹಾಗೂ ಏಕನಾಥ ಬಡಿಗೇರ ನೃಪತುಂಗ ಹುಬ್ಬಳ್ಳಿ ಶಾಖೆಯ ಬಗ್ಗೆ ಮಾತನಾಡಿದರು. ಮಂಜುನಾಥ ಕಾರ್ಕಳ ವಂದಿಸಿದರು.