ಬ್ರಾಹ್ಮಣ ಸಮುದಾಯದಿಂದ ಕಾನೂನು ಘಟಕ ಸ್ಥಾಪನೆ

30-07-Shiva-4
Published on

ರಾಯಚೂರು: ಬ್ರಾಹ್ಮಣರು ವಿವಿಧ ಸಮಸ್ಯೆಗಳ ನಡುವೆಯೂ ಸಮಾಜಕ್ಕೆ ಮಾರ್ಗದರ್ಶನ ನೀಡುವುದರೊಂದಿಗೆ ಜನರಿಗೆ ಒಳಿತು ಬಯಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.

ಶ್ರೀ ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ಸಮುದಾಯದ ಜನರು ಈ ಹಿಂದೆ ಕೃಷಿ ಮತ್ತು ಪೌರೋಹಿತ್ಯದ ಮೇಲೆ ಅವಲಂಬಿತರಾಗಿದ್ದು, ಈಗ ಸ್ವತಂತ್ರವಾಗಿ ಜೀವನ ರೂಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದರು.

ಇತ್ತೀಚಿಗೆ ಬ್ರಾಹ್ಮಣ ಸಮುದಾಯವನ್ನು ಟೀಕಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾಸಭಾದಿಂದ ಕಾನೂನು ಘಟಕ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿದೆ. ಸಮುದಾಯದ ಜನರು ಸಂಘಟಿತರಾಗಿ ನಮ್ಮನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಅಶೋಕ ಹಾರನಹಳ್ಳಿ ಹೇಳಿದರು.

ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲೆಸುವಲ್ಲಿ ವಿಪ್ರ ಸಮುದಾಯದ ಕೊಡುಗೆ ಅಪಾರವಾಗಿದೆ. ಸಮುದಾಯದ ಯುವಕರನ್ನು ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವಂತಾಗಬೇಕು ಎಂದರು.

ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಒಗ್ಗಟ್ಟಾಗಿದ್ದರೆ ಸರ್ಕಾರ ಗಮನ ಹರಿಸುತ್ತದೆ. ಮಠಗಳ ಭೇದದಿಂದ ಚದುರಿದರೆ ಯಾರೂ ಕೇಳುವುದಿಲ್ಲ. ಲಿಂಗಾಯತ ಸಮುದಾಯವೂ ಉಪ ಪಂಗಡಗಳಿಂದ ಛಿದ್ರವಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಹೇಳಿದರು.

ಸಿಂಧನೂರಿನ ಖ್ಯಾತ ವೈದ್ಯ ರಾಘವೇಂದ್ರಾಚಾರ್ ಜೋಷಿಗೆ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ಜಯಣ್ಣ, ಮಹಾಸಭಾ ಜಿಲ್ಲಾ ಪ್ರಧಾನ ಸಂಚಾಲಕ ಡಿ.ಕೆ.ಮುರಳೀಧರ, ಪದಾಧಿಕಾರಿಗಳಾದ ನರಸಿಂಗರಾವ್ ದೇಶಪಾಂಡೆ, ಡಾ.ಆನಂದತೀರ್ಥ ಫಡ್ನವಿಸ್, ಶುಭಮಂಗಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net