

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಹಲವು ವರ್ಷಗಳ ಹೋರಾಟದ ಫಲವಾಗಿ ತಾಲೂಕಾಗಿ ಬದಲಾದ ಬ್ರಹ್ಮಾವರ, ಸದ್ಯ ಪುರಸಭೆಯಾಗಿ ಮೇಲ್ದರ್ಜೆಗೇರಲು ಬೇಕಾಗುವ ಎಲ್ಲ ಅರ್ಹತೆ ಇದ್ದರೂ ಜನಸಾಂದ್ರತೆ ಕೊರತೆ ನೆಪದಲ್ಲಿ ಸರ್ಕಾರ ಪಟ್ಟಣ ಪಂಚಾಯಿತಿಗೆ ಶಿಫಾರಸ್ಸು ಮಾಡಿದೆ. ಆದರೆ ಇದನ್ನು ತಿರಸ್ಕರಿಸಿರುವ ಸ್ಥಳೀಯರು ಪುರಸಭೆಯ ಬೇಡಿಕೆಯಿಟ್ಟು ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ವಾರಂಬಳ್ಳಿ, ಹಂದಾಡಿ, ಹಾರಾಡಿ ಮತ್ತು ಚಾಂತಾರು 4 ಗ್ರಾಮ ಪಂಚಾಯಿತಿಯನ್ನು ಒಳಗೊಂಡ ಬ್ರಹ್ಮಾವರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 2 ಕೇಂದ್ರೀಯ ಪಠ್ಯಕ್ರಮದ ಶಿಕ್ಷಣಸಂಸ್ಥೆ, ಸರ್ಕಾರಿ ಪದವಿ ಕಾಲೇಜು, ಖಾಸಗಿ ಶಿಕ್ಷಣ ಸಂಸ್ಥೆಗಳು, ಸಮುದಾಯ ಆರೋಗ್ಯ ಕೇಂದ್ರ ಎಲ್ಲವೂ ಇದ್ದರೂ 2012 ಜನಗಣತಿ ಆಧಾರದಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಲು ಸಾಧ್ಯವಿಲ್ಲ. ಬ್ರಹ್ಮಾವರದ 4 ಗ್ರಾಮದಲ್ಲಿರುವ ಸಹಸ್ರಾರು ಎಕರೆ ಭೂ ಪ್ರದೇಶ ಹಲವಾರು ಸರ್ಕಾರಿ ಕಚೇರಿ ಮತ್ತು ಸರ್ಕಾರದ ಅಧೀನ ಸಂಸ್ಥೆಗೆ ಈ ಹಿಂದೆ ನೀಡಿರುವುದು ಇದಕ್ಕೆ ಮೂಲ ಕಾರಣ.
ಬಹತೇಕ ಇದು ಉಡುಪಿ ಶಾಸಕ ರಘುಪತಿ ಭಟ್ ಪ್ರತಿನಿಧಿಸುವ ಪ್ರದೇಶವಾಗಿದ್ದು, ಬ್ರಹ್ಮಾವರ ಪುರಸಭೆ ರಚನಾ ಸಮಿತಿ ಸಂಚಾಲಕ ಬಾರಕೂರು ಸತೀಶ್ ಪೂಜಾರಿ ಮತ್ತು ಇನ್ನಿತರ ಜನಪ್ರತಿನಿಧಿಗಳ ನಿಯೋಗ ಉಡುಪಿ ಜಿಲ್ಲಾಧಿಕಾರಿಗಳ ಮುಂದೆ ಪುರಸಭೆಯ ಬೇಡಿಕೆ ಇಟ್ಟಿದ್ದಾರೆ.
ಬ್ರಹ್ಮಾವರದಲ್ಲಿ ಈಗಿರುವ 4 ಗ್ರಾಪಂ ಆಡಳಿತದಲ್ಲಿ ನೀರಿನ, ಒಳಚರಂಡಿ, ತ್ಯಾಜ್ಯ ವಿಲೇವಾರಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗೆ ಪುರಸಭೆ ಆದಲ್ಲಿ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಪರಿಹಾರ ಕಂಡುಕೊಂಡು ಪ್ರಗತಿಗೆ ಪೂರಕವಾಗಲಿದೆ.
ಬ್ರಹ್ಮಾವರದಲ್ಲಿ ಇರುವ ವ್ಯವಸ್ಥೆ ಕಾಪುವಿನಲ್ಲಿ ಇಲ್ಲ. ಆದರೂ ಕಾಪು ಪುರಸಭೆ ಆಗಿದೆ ಅಂದ ಬಳಿಕ ಬ್ರಹ್ಮಾವರ ಪುರಸಭೆ ಆಗಲು ಎಲ್ಲ ಅರ್ಹತೆ ಇದೆ. 43 ವರ್ಷದ ಹಿಂದೆ ಪಟ್ಟಣ ಪಂಚಾಯಿತಿ ಆಗಿದ್ದು ಈಗ ಜನಸಂಖ್ಯೆ, ಆದಾಯ ಹೆಚ್ಚಳವಾಗಿದ್ದು ಪುರಸಭೆ ಆಗಲೇ ಬೇಕು.
ಬಿ.ಭುಜಂಗ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ
ಬ್ರಹ್ಮಾವರ ತಾಲೂಕು ರಚನೆಯಾಗಲು ನಿರಂತರ ಹೋರಾಟ ಮಾಡಿದ್ದೆವು. ಇದೀಗ ಪುರಸಭೆ ಆಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ. ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರಕ್ಕೂ ಒತ್ತಾಯ ಇದೆ.
ಬಾರಕೂರು ಸತೀಶ್ ಪೂಜಾರಿ, ಬ್ರಹ್ಮಾವರ ಪುರಸಭೆ ರಚನಾ ಸಂಚಾಲಕ
ಬ್ರಹ್ಮಾವರ ಪುರಸಭೆ ಮಾಡಲು ಈಗಾಗಲೇ ಸರ್ಕಾರಿ ಮಟ್ಟದಲ್ಲಿ ಕೆಲಸ ಆಗುತ್ತಿದೆ. ಕಾಪು ಪುರಸಭೆಗೆ ಶಿಫಾರಸ್ಸು ಮಾಡಿದ ಅಧಿಕಾರಿಯೊಬ್ಬರು ನಮಗೆ ಸೂಕ್ತ ಮಾರ್ಗ ದರ್ಶನ ನೀಡುತ್ತಿದ್ದಾರೆ. ಗ್ರಾಮ ಮತ್ತು ಜನಸಂಖ್ಯೆಯ ಹೊಸ ನಕ್ಷೆ ಸಿದ್ಧಗೊಳ್ಳುತ್ತಿದೆ.
ರಘುಪತಿ ಭಟ್, ಉಡುಪಿ ಶಾಸಕ