

ಮಂಡ್ಯ: ಬ್ರಹ್ಮಶ್ರೀ ನಾರಾಯಣಗುರು ಅವರು ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹೋರಾಟ ಮಾಡಿದರು. ಆದ್ದರಿಂದ ಅವರನ್ನು ಸಾಮಾಜಿಕ ಸುಧಾರಣೆಯ ಹರಿಕಾರ ಎನ್ನಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿಯ ಭಾಗ ಮತ್ತು ಕೇರಳದಲ್ಲಿ ನಾರಾಯಣ ಗುರುವನ್ನು ಜಾತಿ, ಧರ್ಮದ ಹೊರತಾಗಿ ಪ್ರತಿ ಮನೆಯಲ್ಲಿಯೂ ಆರಾಧಿಸಲಾಗುತ್ತದೆ. ಅದನ್ನ ನಾವು ಅರಿತುಕೊಂಡು ಅವರ ಸಾಧನೆಯನ್ನು ಸ್ಮರಿಸಬೇಕು. ಜತೆಗೆ ತಮ್ಮ ಮಕ್ಕಳಿಗೂ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ನಾರಾಯಣ ಗುರು ಅವರು ಮಹಿಳೆಯರ ಬಗ್ಗೆ ಅಪರವಾದ ಗೌರವವನ್ನು ಇಟ್ಟುಕೊಂಡಿದ್ದರು. ಮಹಿಳೆಯರಿಗೆ ಶಿಕ್ಷಣವನ್ನ ನೀಡಿದರೆ ಇಡೀ ಸಮಾಜವನ್ನ ಬೆಳಗಬಲ್ಲರು, ಆದ್ದರಿಂದ ಆಕೆಗೆ ಶಿಕ್ಷಣ ನೀಡಬೇಕು ಎಂದು ಪಣತೊಟ್ಟವರು. ಜತೆಗೆ ಮಡಿವಂತಿಕೆ ವಿರುದ್ದ ಹೋರಾಡಿ ಮಾನವರೆಲ್ಲರೂ ಒಂದೇ ರೀತಿ ಎನ್ನುವುದನ್ನು ಹೇಳಿದರು. ಮಾನವೀಯ ಮೌಲ್ಯಗಳಿಗಿಂತ ಮಿಗಿಲಾದ ಜಾತಿ ಇಲ್ಲ. ಇಂದು ಅವರು ಇಲ್ಲವಾದರೂ ತತ್ವಾದರ್ಶಗಳು ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದು ಹೇಳಿದರು.
ಮಂಡ್ಯ ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರದ ಉಪನ್ಯಾಸಕ ಜಿ.ವಿ.ರಮೇಶ್ ಮಾತನಾಡಿ, ನಾರಾಯಣಗುರು ಅವರು ಸಮಯವನ್ನು ವ್ಯರ್ಥ ಮಾಡದೆ ಯೋಗ, ಧ್ಯಾನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅಂದಿನ ಕಾಲದ ಕೆಳ ವರ್ಗದಲ್ಲಿ ಇದ್ದಂತಹ ಕಡು ಬಡತನ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮುಂದಾದವರು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಮೈಷುಗರ್ ಮಾಜಿ ಅಧ್ಯಕ್ಷ ರಾಮಲಿಂಗಯ್ಯ, ಜಿಲ್ಲಾ ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಡಾ.ಎಂ.ವಿ.ಸತ್ಯನಾಥ್, ಅಧ್ಯಕ್ಷ ಅಪ್ಪಾಜಿಗೌಡ, ಉಪಾಧ್ಯಕ್ಷರಾದ ಎಚ್.ದಾಸೇಗೌಡ, ಎಂ.ಪಿ. ಅರುಣ್‌ಕುಮಾರ್, ಎಂ.ವಿ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಜಿ.ಸಿ.ರಾಜ್‌ಕುಮಾರ್, ಖಜಾಂಚಿ ಟಿ.ಅರವಿಂದ ಕುಮಾರ್, ಸಹ ಕಾರ್ಯದರ್ಶಿ ಮಾದೇವ, ಸಿ.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಟಿ.ಎಸ್.ಶ್ರೀನಿವಾಸ್ ಇತರರಿದ್ದರು.