

ಎನ್.ಆರ್.ಪುರ: ನಾರಾಯಣ ಗುರು ಜಯಂತಿಯನ್ನು ತಾಲೂಕು ಕಚೇರಿಯಲ್ಲಿ ಆ.31ರಂದು ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಗುರುವಾರ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಿಸುವ ಕುರಿತು ಚರ್ಚೆ ನಡೆಸಲಾಯಿತು. ತಹಸೀಲ್ದಾರ್ ಮಾತನಾಡಿ, ನಾರಾಯಣ ಗುರು ಜಯಂತಿ ಆಚರಣೆ ಸಮಾರಂಭದಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳು ಭಾಗವಹಿಸಬೇಕು. ರಾಷ್ಟ್ರೀಯ ಹಬ್ಬಗಳಿಗೆ ಕೆಲವು ಅಧಿಕಾರಿಗಳು ಗೈರಾಗುತ್ತಿದ್ದಾರೆ. ಆದ್ದರಿಂದ ಮುಂದೆ ಎಲ್ಲ ಅಧಿಕಾರಿಗಳು ಭಾಗವಹಿಸಬೇಕು ಎಂದು ಸೂಚಿಸಿದರು.
ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಮಾತನಾಡಿ, ರಾಷ್ಟ್ರೀಯ ಹಬ್ಬಗಳಲ್ಲಿ ಹಿಂದಿ ಗೀತೆಗೆ ಮಕ್ಕಳು ನೃತ್ಯ ಮಾಡುತ್ತಾರೆ. ಕನ್ನಡದ ಗೀತೆಗಳನ್ನು ಹಾಕಬೇಕು ಎಂದು ಸಲಹೆ ನೀಡಿದರು. ತಹಸೀಲ್ದಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ರಾಷ್ಟ್ರೀಯ ಹಬ್ಬಗಳು ಹಾಗೂ ಶಾಲೆಗಳಲ್ಲಿ ಕನ್ನಡ ಗೀತೆ ಹಾಕಲು ಸೂಚಿಸುತ್ತೇನೆ ಎಂದರು.
ವಾಲ್ಮೀಕಿ ಸಂಘದ ಕ್ಷೇತ್ರ ಅಧ್ಯಕ್ಷ ಎ.ಸಿ.ಶ್ರೀನಿವಾಸ್, ಆರೋಗ್ಯ ಇಲಾಖೆಯ ಪಿ.ಪಿ.ಬೇಬಿ, ಕೃಷಿ ಇಲಾಖೆಯ ಪ್ರಕಾಶ್, ಶಿರಸ್ತೇದಾರ್ ಸಚಿನ್, ತಾಲೂಕು ಕಚೇರಿ ವಿಷಯ ನಿರ್ವಾಹಕ ಅನಿಲ್, ತೋಟಗಾರಿಕೆ ಇಲಾಖೆಯ ಸುನೀಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಿರಂಜನಮೂರ್ತಿ, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.