ಈಡಿಗರ ಪ್ರಗತಿಗೆ ಮುಂದಾಗದ ಸರ್ಕಾರ

PRANAVA
ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಹಿನ್ನೆಲೆಯಲ್ಲಿ ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದ ಬಸವೇಶ್ವರ ಪ್ರತಿಮೆ ಬಳಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಸೋಮವಾರ ಸ್ಥಳ ಪರಿಶೀಲಿಸಿದರು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಈಡಿಗ ಸಮುದಾಯದ ತಾಲೂಕು ಅಧ್ಯಕ್ಷ ಈ.ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಭುವನೇಶಪ್ಪ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ಇತರರಿದ್ದರು.
Published on

ಗಂಗಾವತಿ: ಈಡಿಗ ಮತ್ತು ಉಪಪಂಗಡಗಳನ್ನು ಎಸ್ಟಿಗೆ ಸೇರಿಸುವ ಪ್ರಸ್ತಾವನೆ ಅಂಗೀಕರಿಸುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಡಿ.10ರಂದು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಮತ್ತು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳ ಅಧ್ಯಕ್ಷ ಡಾ.ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಸವೇಶ್ವರ ಪ್ರತಿಮೆ ಬಳಿ ಸೋಮವಾರ ಸ್ಥಳ ಪರಿಶೀಲಿಸಿ ಮಾತನಾಡಿದರು. ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಈಡಿಗ ಸಮುದಾಯಕ್ಕೆ ಮಂಡಳಿ ಸ್ಥಾಪಿಸಿದ್ದು, 5 ಕೋಟಿ ರೂ. ಅನುದಾನ ಜತೆಗೆ ಕುಲಶಾಸೀಯ ಅಧ್ಯಯನಕ್ಕೆ 25 ಲಕ್ಷ ರೂ. ೋಷಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸಮುದಾಯದ ಮಂಡಳಿಗೆ ನಯ್ಯಪೈಸೆ ನೀಡಿಲ್ಲ, ಕುಲಶಾಸೀಯ ಅಧ್ಯಯನಕ್ಕೂ ಹಣ ನೀಡುತ್ತಿಲ್ಲ ಎಂದು ದೂರಿದರು.

ಈಡಿಗ ಮತ್ತು ಉಪ ಪಂಗಡಗಳಿಗೆ ಆಸರೆಯಾಗಿದ್ದ ಸೇಂದಿ ಮಾರಾಟವನ್ನು 2004ರಲ್ಲಿ ಸರ್ಕಾರ ನಿಷೇಧಿಸಿದ್ದು, ಇದುವರೆಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಸಂಕಷ್ಟಕ್ಕೊಳಗಾದ ಕುಟುಂಬಕ್ಕೆ 2 ಎಕರೆ ಭೂಮಿ ವಿತರಿಸುವ ಯೋಜನೆ ಇನ್ನೂ ಜಾರಿಯಾಗಿಲ್ಲ. ಈಡಿಗ ಮತ್ತು ಉಪಪಂಗಡಗಳನ್ನು ಎಸ್ಟಿಗೆ ಸೇರಿಸುವಂತೆ ರಾಜ್ಯ ಮತ್ತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪಾದಯಾತ್ರೆ, ಸಮಾವೇಶ ಕೈಗೊಂಡರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.

ಸಮುದಾಯಕ್ಕೆ ಮೀಸಲು ೋಷಣೆ, ಆರ್ಥಿಕಾಭಿವೃದ್ಧಿ ಯೋಜನೆ ಜಾರಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು. ಈಡಿಗ ಸಮುದಾಯದಂತೆ ಬ್ರಾಹ್ಮಣ, ವೀರಶೈವ ಉಪ ಪಂಗಡಗಳಲ್ಲೂ ಅತಿ ಬಡ ಕುಟುಂಬಗಳಿದ್ದು, ಆರ್ಥಿಕಾಭಿವೃದ್ಧಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಲಾಗುವುದು. ಸತ್ಯಾಗ್ರಹದಲ್ಲಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಬಹುತೇಕ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಾಜಿ ಎಂಎಲ್ಸಿ ಹಾಗೂ ಆರ್ಯ ಈಡಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಎಚ್.ಆರ್. ಶ್ರೀನಾಥ ಮಾತನಾಡಿ, ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಶ್ರೀಗಳಿಗೆ ಸಮುದಾಯ ನಿರಂತರ ಬೆಂಬಲ ನೀಡಲಿದೆ. ಸಮುದಾಯದ ಮಂಡಳಿಗೆ 500 ಕೋಟಿ ರೂ. ಒದಗಿಸುವಂತೆ ಒತ್ತಾಯಿಸಲಾಗುವುದು ಎಂದರು.

ಸಂಘದ ತಾಲೂಕು ಆಧ್ಯಕ್ಷ ಈ.ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಭುವನೇಶಪ್ಪ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ವಿವಿಧ ಸಮುದಾಯದ ಮುಖಂಡರಾದ ಸುರೇಶ, ಜಿ.ಮಂಜುನಾಥ, ಹನುಮಂತರಾಯ, ವೀರನಗೌಡ ಇತರರಿದ್ದರು.

ಬೇಡಿಕೆ ಈಡೇರಿಕೆಗೆ ಏಪ್ರಿಲ್‌ವರೆಗೆ ಗಡವು

ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಸಂಪೂರ್ಣ ನಿರ್ಲಕ್ಷಿಸುತ್ತಿದ್ದು, ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು. ಈ ಹಿಂದೆ ವೀರಶೈವ ಸಮುದಾಯ ಒಡೆದಂತೆ ಈಡಿಗ ಸಮುದಾಯಕ್ಕೂ ಕೈ ಹಾಕಿದ್ದಾರೆ. ಶೋಷಿತ ಸಮುದಾಯದ 24 ಮಂಡಳಿಗಳ ಪೈಕಿ 7ಕ್ಕೆ ಮಾತ್ರ ಅನುದಾನ ನೀಡಿರುವ ಕಾಂಗ್ರೆಸ್ ಸರ್ಕಾರ, ಬ್ರಹ್ಮಶ್ರೀ ನಾರಾಯಣಗುರು ಮಂಡಳಿ ಸಂಪೂರ್ಣ ನಿರ್ಲಕ್ಷಿಸಿದೆ. ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆಸುವ ಅಗತ್ಯವಿಲ್ಲ. ಬಡ ಮತ್ತ ಶೋಷಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಹೊರತು, ವೈಯಕ್ತಿಕ ಹಿತಾಸಕ್ತಿಗಲ್ಲ. ಈಡಿಗ ಸಮುದಾಯಕ್ಕೆ ಲೋಕಸಭೆ ಬಿ.ಫಾರಂ ಮೀಸಲಿಡುವಂತೆ ಒತ್ತಾಯಿಸಿರುವ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನ್ಯಾಯಯುತವಾಗಿದ್ದು, ಎಲ್ಲ ರೀತಿಯಿಂದ ಬೆಂಬಲ ನೀಡಲಾಗುವುದು. ಬೇಡಿಕೆ ಈಡೇರಿಕೆಗೆ ಏಪ್ರಿಲ್ ವರೆಗೆ ಗಡವು ನೀಡಲಾಗುತ್ತಿದ್ದು, ನಿರ್ಲಕ್ಷಿಸಿದರೆ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net