

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗರುಡಾಚಾರ್‌ಪಾಳ್ಯದ ಶ್ರೀ ಮಂಜುನಾಥಸ್ವಾಮಿಯ ಎರಡನೇ ವರ್ಷದ ಬ್ರಹ್ಮರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮಹಾಶಿವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ರಥ ಎಳೆಯುವ ಮೂಲಕ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು.
ಮಾಜಿ ಸಚಿವ ಎಂಟಿಬಿ ನಾಗರಾಜ್, ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ಪುರಶೋತ್ತಮ್ ಹಾಗೂ ಹೊಸಕೋಟೆ ಗ್ರಾಮಾಂತರ ಬಿಜೆಪಿ ಮಂಡಲಾಧ್ಯಕ್ಷ ಕೆ.ಸತೀಶ್ ಭಕ್ತರೊಂದಿಗೆ ಸೇರಿ ರಥ ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಮುಂಜಾನೆಯಿಂದಲೇ ಶಿವರಾತ್ರಿ ಪ್ರಯುಕ್ತ ಶ್ರೀ ಮಂಜುನಾಥ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆಗಳು ಆರಂಭವಾದವು, ತಳಿರು ತೋರಣಗಳಿಂದ ದೇವಾಲಯವನ್ನು ಸಿಂಗರಿಸಲಾಗಿತ್ತು. ಬಿಲ್ಪತ್ರೆಯ ಅಲಂಕಾರ ವಿಶೇಷವಾಗಿ ಗಮನ ಸೆಳೆಯಿತು. ರಾಜಬೀದಿಗಳಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿ ಹೊತ್ತು ಸಾಗಿದ ರಥಕ್ಕೆ ಭಕ್ತರು ಬಾಳೆಹಣ್ಣು ದವನ ಎಸೆದು ಪ್ರಾರ್ಥನೆ ಸಲ್ಲಿಸಿದರು.
ಕಲಾತಂಡಗಳೊಂದಿಗೆ ನೃತ್ಯ: ಮಹಾ ಶಿವರಾತ್ರಿ ಅಂಗವಾಗಿ ಶ್ರೀ ಮಂಜುನಾಥಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು, ಪಂಚಾಮೃತ ಪೂರ್ವ ರುದ್ರಾಭಿಷೇಕ, ಮಹಾಮಂಗಳಾರತಿ, ರಥಪೂಜೆ ರಥಬಲಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಾದಸ್ವರ, ಗೊಂಬೆಕುಣಿತ, ಚಂಡೆವಾದ್ಯ, ತಮಟೆವಾದ್ಯ, ಭರತನಾಟ್ಯ ನೃತ್ಯರೂಪಕಗಳನ್ನು ಆಯೋಜಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬ್ರಹ್ಮರಥೋತ್ಸವ ಮೆರವಣಿಗೆ ನಡೆಯಿತು. ಮಹಿಳೆಯರು ಕಳಸ ಹೊತ್ತು ಮೆರವಣಿಯಲ್ಲಿ ಸಾಗಿದರು, ಇದೇ ವೇಳೆ ಜಾನಪದ ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿದ ಎಂಟಿಬಿ ನಾಗರಾಜ್ ನೃತ್ಯ ಮಾಡುವ ಮೂಲಕ ಜನರ ಗಮನ ಸೆಳೆದರು. ಬುಧವಾರ ಇಡೀ ರಾತ್ರಿ ಶ್ರೀ ಮಂಜುನಾಥ ದೇವಾಲಯದ ಪ್ರಾಂಗಣದಲ್ಲಿ ಭಕ್ತರು ಜಾಗರಣೆ ನಡೆಸಿದರು. ಶಿವನ ಸ್ತ್ರೋತ್ರಗಳನ್ನು ಪಠಿಸುತ್ತಾ ದೇವರ ಧ್ಯಾನದಲ್ಲಿ ತಲ್ಲೀನರಾದ ದೃಶ್ಯ ಕಂಡುಬಂತು. ಪ್ರತಿ ಅರ್ಧ ಗಂಟೆಗೊಮ್ಮೆ ಶ್ರೀ ಮಂಜುನಾಥ ಸ್ವಾಮಿಗೆ ಮಂಗಳಾರತಿ ನೆರವೇರಿಸುವ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಯಿತು. ಲಾಡು ಪ್ರಸಾದ, ಅವಲಕ್ಕಿ ಸಿಹಿ ಹಾಗೂ ಅನ್ನದಾಸೋಹದೊಂದಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು.
ದೇವರಿಗೆ ಶರಣಾಗಿ: ಗರುಡಾಚಾರ್‌ಪಾಳ್ಯದಲ್ಲಿ ಪ್ರತಿಷ್ಟಾನೆಯಾದ ಶ್ರೀ ಮಂಜುನಾಥ ಸ್ವಾಮಿ ದೇಗುಲದ ಎರಡನೇ ಬ್ರಹ್ಮರಥೋತ್ಸವ ಇದಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು. ಬ್ರಹ್ಮರಥೋತ್ಸವದ ವೇಳೆ ಮಾತನಾಡಿದ ಅವರು, ದೇವರಿಗೆ ಶರಣಾಗಿ, ಭಕ್ತಿ ಭಾವದಿಂದ ದೇವರ ನೆನೆದರೆ ಜೀವನ ಸನ್ಮಾರ್ಗದಲ್ಲಿ ನಡೆಯುತ್ತದೆ, ದೇವರನ್ನು ನಂಬಿ ಕೆಟ್ಟವರಲ್ಲಿ ಎಂಬ ಹಿರಿಯ ನಾಣ್ನುಡಿಯಂತೆ ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು. ಇಲ್ಲಿನ ಶ್ರೀ ಮಂಜುನಾಥ ದೇವಸ್ಥಾನ ಪುರಾತನದ್ದಾಗಿದ್ದು, ಕಳೆದ 2 ವರ್ಷದ ಹಿಂದೆ ನೂತನವಾಗಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಶಿವರಾತ್ರಿ ಪ್ರಯುಕ್ತ ಶ್ರೀ ಮಂಜುನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಎಂಟಿಬಿ ಅವರ ನೇತೃತ್ವದಲ್ಲಿ ಉತ್ಸವ: ಗರುಡಾಚಾರ್‌ಪಾಳ್ಯದಲ್ಲಿನ ಶ್ರೀ ಮಂಜುನಾಥ ಸ್ವಾಮಿ ಬ್ರಹ್ಮರಥೋತ್ಸವವು ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿದೆ. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಹೊಸಕೋಟೆ ಗ್ರಾಮಾಂತರ ಬಿಜೆಪಿ ಮಂಡಲಾಧ್ಯಕ್ಷ ಕೆ.ಸತೀಶ್ ಹೇಳಿದರು. ಕಳೆದ ಎರಡು ವರ್ಷದಿಂದ ಬ್ರಹ್ಮರಥೋತ್ಸವ ಆಚರಿಸಲಾಗುತ್ತಿದ್ದು, ಈ ದೇವಸ್ಥಾನ ಧರ್ಮಸ್ಥಳದ ಪ್ರತಿರೂಪದಂತೆ ಕಾಣುತ್ತಿದೆ ಎಂದು ಹೇಳಿದರು. ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಶಿವರಾತ್ರಿಯನ್ನು ಆಚರಿಸೋಣ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆಯಾಗಿರುವ ಪರಮಶಿವನು ಭಕ್ತರ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.