

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪ್ರತೀ ವರ್ಷದಂತೆ ಈ ಬಾರಿಯೂ ಪಟ್ಟಣದ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ಆಚರಣೆಗಳೊಂದಿಗೆ ಸಕಲ ವಿಧಿ-ವಿಧಾನಗಳ ಮೂಲಕ ಸಾವಿರಾರು ಭಕ್ತರು ತಾಲೂಕಿನ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ರಥ ಎಳೆದು ಸಂಭ್ರಮಿಸಿದರು.
ತಾಲೂಕು ಖಜಾನೆಯಿಂದ ಸ್ವಾಮಿಯ ರತ್ನಖಚಿತ ವಜ್ರ ವೈಡೂರ್ಯ ಹಾಗೂ ಚಿನ್ನಾಭರಣಗಳನ್ನು ಪೋಲೀಸರ ಕಾವಲಿನೊಂದಿಗೆ ತಹಸೀಲ್ದಾರ್ ಎಚ್.ಬಾಲಕೃಷ್ಣ ನೇತೃತ್ವದಲ್ಲಿ ದೇವಾಲಯಕ್ಕೆ ತಂದು ಆಭರಣಗಳನ್ನು ದೇವರ ಮೂರ್ತಿಗೆ ತೊಡಿಸಿ ದೇವಾಲಯದ ಸುತ್ತಲು ಪ್ರದಕ್ಷಿಣೆ ಹಾಕಲಾಯಿತು. ರಥೋತ್ಸವದ ತೇರಿನಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಪ್ರತಿಷ್ಠಾಪಿಸಿ ನಂತರ ಸಚಿವ ಕೆಎಚ್.ಮುನಿಯಪ್ಪ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ತೇರಿಗೆ ಧವನ ಸಮೇತ ಬಾಳೆಹಣ್ಣನ್ನು ಎಸೆದರು. ನಂತರ ತೇರನ್ನು ದೇಶದ ಪೇಟೆ ಗಾಂಧಿಚೌಕದಲ್ಲಿ ತಂದು ನಿಲ್ಲಿಸಲಾಯಿತು. ಭಕ್ತರು ಪೂಜೆ-ಪುನಸ್ಕಾರ ನೆರವೇರಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಸಂಜೆ ವೇಳೆಯಷ್ಟರಲ್ಲಿ ತೇರನ್ನು ದೇವಾಲಯದ ಬಳಿ ತಂದು ನಿಲ್ಲಿಸಲಾಯಿತು.
ಗೋಕರೆ ಗ್ರಾಮಸ್ಥರಿಂದ ರಥ ಬಿಚ್ಚುವ ಕೆಲಸ
ಧಾರ್ಮಿಕ ದತ್ತಿ ಇಲಾಖೆ ಹಾಗೂ ವೇಣುಗೋಪಾಲಸ್ವಾಮಿ ರಥೋತ್ಸವ ಸಮಿತಿಯಿಂದ ನಡೆದ ಕಾರ್ಯಕ್ರಮಗಳಲ್ಲಿ ರಥಸಪ್ತಮಿಯಿಂದ 9 ದಿನಗಳು ಆಚರಣೆಗೊಂಡ ಕಾರ್ಯಕ್ರಮಗಳಲ್ಲಿ ಪಟ್ಟಣದ ಅಯೋಧ್ಯಾನಗರ ಶಿವಾಚಾರ ನಗರ್ತ ಸಂಘದವರಿಂದ ಕಲ್ಯಾಣೋತ್ಸವ, ಬಿದಲೂರಿನ ಗ್ರಾಮಸ್ಥರಿಂದ ರಥವನ್ನು ಕಟ್ಟುವ ಕೆಲಸವಾದರೇ, ಗೋಕರೆ ಗ್ರಾಮಸ್ಥರು ರಥವನ್ನು ಬಿಚ್ಚುವ ಕೆಲಸ ಮಾಡಲಿದ್ದಾರೆ.
ತಹಸೀಲ್ದಾರ್ ಎಚ್.ಬಾಲಕೃಷ್ಣ ಮಾತನಾಡಿ, ಪಟ್ಟಣದ ಪ್ರಧಾನ ದೈವ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವವನ್ನು ತಾಲೂಕು ಆಡಳಿತ ಹಾಗೂ ವ್ಯವಸ್ಥಾಪನಾ ಸಮಿತಿಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವ್ಯವಸ್ಥಿತವಾಗಿ ನೆರವೇರಿಸಲು ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಆಗಮಿಸಿದ ಭಕ್ತಾಧಿಗಳಿಗೆ ಶ್ರೀ ವೇಣುಗೋಪಾಲಸ್ವಾಮಿ ಆರೋಗ್ಯ-ಭಾಗ್ಯಗಳನ್ನು ನೀಡಿ ಕಾಪಾಡಲಿ ಎಂದರು.