ಭಟ್ಕಳ ಕರಿಕಲ್ ಶಾಖಾ ಮಠದಲ್ಲಿ ಬ್ರಹ್ಮಾನಂದ ಶ್ರೀ ಚಾತುರ್ಮಾಸ್ಯ : 21ರಿಂದ ವ್ರತಾಚರಣೆ : ವೈಭವದ ಪುರಪ್ರವೇಶ ಮೆರವಣಿಗೆ

swamiji
ಬ್ರಹ್ಮಾನಂದ ಸ್ವಾಮೀಜಿ
Published on

ಬೆಳ್ತಂಗಡಿ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚಾರಣೆ ಕ್ಷೇತ್ರದ ಶಾಖಾ ಮಠ ಭಟ್ಕಳದ ಕರಿಕಲ್‌ನಲ್ಲಿ ಜುಲೈ 21ರಿಂದ ಆ.30ರ ವರೆಗೆ ನಡೆಯಲಿದೆ.

21ರ ಗುರುಪೂರ್ಣಿಮೆಯಂದು ಬೆಳಗ್ಗೆ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ವೈದಿಕ ವಿಧಿವಿಧಾನ, ಶ್ರೀ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಶ್ರೀಗಳ ಪುರಪ್ರವೇಶದ ವೈಭವದ ಮೆರವಣಿಗೆ, ಕರಿಕಲ್ ಮಠದಲ್ಲಿ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ, ಶ್ರೀಗಳ ಗುರುಪೂರ್ಣಿಮೆಯ ವ್ಯಾಸಪೀಠ ಪೀಠಾರೋಹಣ, ಗುರು ಪಾದುಕ ಪೂಜೆ, ಶ್ರೀಗಳ ಆಶೀರ್ವಚನ ಮುಂತಾದ ಕಾರ್ಯಕ್ರಮಗಳು ನೆರವೇರಲಿವೆ.

ಧಾರ್ಮಿಕ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ ಎಸ್.ವೈದ್ಯ ಉದ್ಘಾಟಿಸಲಿದ್ದು, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದರಾದ ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಎಂಎಲ್‌ಸಿ ಹರಿಪ್ರಸಾದ್, ಶಾಸಕರಾದ ವಿ.ಸುನೀಲ್ ಕುಮಾರ್, ಬೇಲೂರು ಗೋಪಾಲಕೃಷ್ಣ, ಭೀಮಣ್ಣ ಸಿರ್ಸಿ, ಹರೀಶ್ ಪೂಂಜ, ದಿನೇಶ್ ಶೆಟ್ಟಿ ಕುಮಟಾ, ಶಿವರಾಮ್ ಹೆಬ್ಬಾರ್ ಯಲ್ಲಾಪುರ, ಸತೀಶ್ ಸೈಲ್ ಕಾರವಾರ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಶಿವಾನಂದ ನಾಯ್ಕ, ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಭಟ್ಕಳದ ಮಾಜಿ ಶಾಸಕರಾದ ಸುನೀಲ್ ನಾಯ್ಕ, ಜೆ.ಡಿ.ನಾಯ್ಕ ಮೊದಲಾದವವರು ಭಾಗವಹಿಸಲಿದ್ದಾರೆ.

ಚಾತುರ್ಮಾಸ್ಯ ಪರ್ವ ಕಾಲದಲ್ಲಿ ಪ್ರತಿದಿನ ಭಜನೆ, ಪಾದುಕ ಪೂಜೆ, ಸಂಜೆ 6ರಿಂದ 10ರ ತನಕ ಭಕ್ತಿಪ್ರಧಾನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿಯಂದು ಶ್ರೀಗಳು ಮೌನ ವ್ರತದಲ್ಲಿರುವುದರಿಂದ ಆ ದಿನಗಳಲ್ಲಿ ಸೂರ್ಯಾಸ್ತದ ಬಳಿಕ ಗುರುಗಳು ದರ್ಶನಕ್ಕೆ ಇರುತ್ತಾರೆ. ಸೆ.3ರಂದು ಶ್ರೀ ಗುರುದೇವ ಮಠದಲ್ಲಿ ಶ್ರೀಗಳ ಪಟ್ಟಾಭಿಷೇಕ ವರ್ಧಂತಿ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net