

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ಬ್ರಹ್ಮಾನಂದ ಮಹಾಸ್ವಾಮೀಜಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಭಕ್ತರ ಜಯಘೋಷಗಳೊಂದಿಗೆ ರಥೋತ್ಸವ ನೆರವೇರಿಸಲಾಯಿತು. ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿ ಪುನೀತಗೊಂಡರು. ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗ್ಗೆ ರುದ್ರಾಭಿಷೇಕ ಮತ್ತು ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ದಾಸೋಹ ಸೇವೆ ಜರುಗಿತು. ರಥೋತ್ಸವದಲ್ಲಿ ಕನ್ನಡದ ಬಾವುಟದ ಜತೆಗೆ ಭಾವೈಕ್ಯ ಸಾರುವ ಧ್ವಜಗಳನ್ನು ಕಟ್ಟಲಾಗಿತ್ತು. ಈ ಮೂಲಕ ನಾಡಿಗೆ ಭಾವೈಕ್ಯ ಸಂದೇಶ ನೀಡಲಾಯಿತು. ವಿಶೇಷ ರಥದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಂಗವಾಗಿ ನೆರವೇರಿತು. ಭೈರನಹಟ್ಟಿ ವಿರಕ್ತಮಠ- ಶಿರೋಳ ತೋಂಟದಾರ್ಯ ಮಠಗಳ ಪೀಠಾಧಿಪತಿ ಶಾಂತಲಿಂಗ ಸ್ವಾಮೀಜಿ ಜಾತ್ರಾ ಮಹೋತ್ಸವದ ಸಾನ್ನಿಧ್ಯವಹಿಸಿದ್ದರು.