ಸಮಾಜದ ಏಕತೆಗೆ ಸಂಘಟನೆ ಪೂರಕ: ಪೇಜಾವರ ಶ್ರೀ

UDP-15-PEJAVARA
Published on

ಉಡುಪಿ: ಬ್ರಾಹ್ಮಣರು ಸಂಘಟನೆ ಮೂಲಕ ಐಕ್ಯಮತ್ಯ ಸಾಧಿಸಿದರೆ ಮುಂದಿನ ಪೀಳಿಗೆಯೂ ಸಮಾಜದಲ್ಲಿ ತಲೆಎತ್ತಿ ಬಾಳಲು ಸಾಧ್ಯ. ಸಂಘಟನೆಗಳು ಸಮಾಜಕ್ಕೆ ಪೂರಕವಾಗಿರಬೇಕು ಹೊರತು ಮಾರಕವಾಗಿರಬಾರದು. ಕಿತ್ತಳೆ ಹಣ್ಣಿನಲ್ಲಿ ತೊಳೆಗಳು ಒಂದಕ್ಕೊಂದು ಒಮ್ಮುಖವಾಗಿರುವಂತೆ ಬ್ರಾಹ್ಮಣ ಸಮಾಜದ ಎಲ್ಲ ಶಾಖೆ, ಪಂಥಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಶನಿವಾರ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ರಜತ ಮಹೋತ್ಸವ ಲಾಂಛನ ಅನಾವರಣಗೊಳಿಸಿ, 60ರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಜನಗಣ ಮನವು ರಾಷ್ಟ್ರಗೀತೆಯಾದರೆ, ಗಾಯತ್ರಿ ಮಂತ್ರವು ಬ್ರಹ್ಮಗೀತೆಯಾಗಿದ್ದು, ನಿತ್ಯ ಧಾರ್ಮಿಕ ಅನುಷ್ಠಾನ ಮಾಡಬೇಕು ಎಂದರು.

ನಿರ್ಗತಿಕರಿಗೆ ಸಹಾಯ
ಸಮಾಜದಲ್ಲಿರುವ ನಿರ್ಗತಿಕರನ್ನು ಗುರುತಿಸಿ ಸಹಾಯ ಮಾಡುವುದು ಆದ್ಯ ಕರ್ತವ್ಯವಾಗಿದ್ದು, ಎಲ್ಲರೂ ಈ ಬಗ್ಗೆ ಕಾರ್ಯಪ್ರವೃತ್ತರಾದರೆ ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದೆ. 60ನೇ ಜನ್ಮವರ್ಧಂತಿ ಅಂಗವಾಗಿ ಬಡವರಿಗೆ 6 ಮನೆ ನಿರ್ಮಿಸಿಕೊಡಲು ಸಂಕಲ್ಪ ಮಾಡಲಾಗಿದೆ. 9 ಮಂದಿಗೆ ನಿವೇಶನಗಳನ್ನು ನೀಡಿದ್ದೇವೆ. ಬ್ರಾಹ್ಮಣ ಸಭಾದವರು ತಮ್ಮ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿ ರಹಿತರನ್ನು ಗುರುತಿಸಿ ನೆರವು ನೀಡಬೇಕು ಎಂದರು.

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು.ಅಭ್ಯಾಗತರಾಗಿ ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಸುಬ್ರಹ್ಮಣ್ಯ ಎಡಪಡಿತ್ತಾಯ, ಶ್ರೀಕ್ಷೇತ್ರ ಹೊರನಾಡು ಧರ್ಮದರ್ಶಿ ಜಿ.ಭೀಮೇಶ್ವರ ಜೋಶಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಅರ್.ವಾಸುದೇವ, ನಗರಸಭಾ ಸದಸ್ಯರಾದ ಕೃಷ್ಣರಾವ್ ಕೊಡಂಚ, ಮಹಾಸಭಾ ಪ್ರ.ಕಾ. ಸಂದೀಪ್ ಮಂಜ, ಕೋಶಾಧಿಕಾರಿ ನಾರಾಯಣ ದಾಸ ಉಡುಪ, ರಜತ ಸಮಿತಿ ಅಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಪ್ರ.ಕಾ. ಜಯರಾಮ ಆಚಾರ್ಯ, ಕೋಶಾಧಿಕಾರಿ ಜನಾರ್ದನ ಭಟ್, ಸಂಚಾಲಕ ಶ್ರೀಕಾಂತ ಉಪಾಧ್ಯಾಯ ಉಪಸ್ಥಿತರಿದ್ದರು. ಆರ್‌ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net