ಲವ್ ಜಿಹಾದ್‌ಗೆ ಬ್ರಾಹ್ಮಣ ಹೆಣ್ಮಕ್ಕಳೇ ಟಾರ್ಗೆಟ್: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಕಳವಳ

brahmana
Published on

ಉಡುಪಿ: ಹಿಂದುತ್ವ ಉಳಿಯಬೇಕು ಎಂದಲ್ಲಿ ಬ್ರಾಹ್ಮಣತ್ವ ಉಳಿಯಬೇಕು, ಹಿಂದುತ್ವ- ಬ್ರಾಹ್ಮಣ ವಿರೋಧಿ ಷಡ್ಯಂತ್ರದ ಭಾಗವಾಗಿ ಲವ್ ಜಿಹಾದ್‌ಗೆ ಬ್ರಾಹ್ಮಣ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ದೊಡ್ಡಣಗುಡ್ಡೆಯಲ್ಲಿ ಭಾನುವಾರ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತು ವತಿಯಿಂದ ಜರುಗಿದ ಬ್ರಾಹ್ಮೀ ಸಭಾಭವನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. 10,800 ಲವ್ ಜಿಹಾದ್ ಪ್ರಕರಣದಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣದಲ್ಲಿ ಬ್ರಾಹ್ಮಣ ಹೆಣ್ಣುಮಕ್ಕಳೇ ಲವ್‌ಜಿಹಾದ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಉತ್ತರಕನ್ನಡ, ಶಿರಸಿ ಭಾಗ ಹೆಚ್ಚು ಪ್ರಕರಣಗಳು ನಡೆದಿವೆ ಎಂದರು. ಬ್ರಾಹ್ಮಣರಲ್ಲಿ 44 ಉಪ ಜಾತಿಗಳಿವೆ. ಎಲ್ಲರೂ ಹಿರಿಮೆ- ಕೀಳರಿಮೆ ಬಿಟ್ಟು ಸಂಘಟಿತರಾಗಬೇಕು. ‘ಸರ್ವೇಜನಾ ಸುಖಿನೋಭವಂತು ಎನ್ನುವ ನಮ್ಮನ್ನು ಹೀಯಾಳಿಸುವ ಮನೋಭಾವ ಹೆಚ್ಚುತ್ತಿದೆ. ಇದು ಮರುಕಳಿಸಿದಲ್ಲಿ ಸರಿಯಾದ ಪಾಠ ಕಲಿಸುತ್ತೇವೆ. ಸಾಹಿತ್ಯ, ಸಿನಿಮಾ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ಅವಹೇಳನ, ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 347 ಕೋಟಿ ರೂ. ಅನುದಾನ ನೀಡುವ ಬಗ್ಗೆ ಸರ್ಕಾರ ಭರವಸೆ ನೀಡಿದ್ದು, ಸಾಮೂಹಿಕ ವಿವಾಹ, ಜಿಲ್ಲೆಗೊಂದು ಬ್ರಾಹ್ಮಣ ಸಮುದಾಯ ಭವನ, ಅಪರಕರ್ಮ ಕಟ್ಟಡ, ವಸತಿ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಭಾವಿ ಪರ್ಯಾಯ ಮಠಧೀಶರಾದ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಬ್ರಾಹ್ಮಣತ್ವ ಉಳಿಯಬೇಕಾದರೆ ಅನುಷ್ಠಾನಗಳು ಅಗತ್ಯ. ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿದಾಗ ಆತ್ಮಬಲ ವೃದ್ಧಿಯಾಗುವುದರೊಂದಿಗೆ ಸ್ವಾಭಾವಿಕ ಬಲ ಗಟ್ಟಿಗೊಳ್ಳಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಾಗ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದರು.

ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಮಂಗಳೂರು ಸಿಇಒ ಹಾಗೂ ಎಂಡಿ ಎಂ.ಎಸ್. ಮಹಾಬಲೇಶ್ವರ, ಉದ್ಯಮಿ ವಿದ್ಯಾ ಪ್ರಸಾದ್, ಬೆಂಗಳೂರಿನ ಕೆ.ಆರ್. ದಿನೇಶ್, ಹರಿಕೃಷ್ಣ, ಹುಬ್ಬಳ್ಳಿ ಹೊಟೇಲ್ ಉದ್ಯಮಿ ಶ್ರೀಕಾಂತ್ ಭಟ್ ಕೆಮ್ತೂರು, ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್, ಬೆಂಗಳೂರು ನಿಸರ್ಗ ಆಯುರ್ವೇದಿಕ್ ಮೆಡಿಸಿನ್‌ನ ಡಾ.ವಿ. ಅಶೋಕ್ ಕುಮಾರ್, ಪೆರಂಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್. ಪ್ರಸನ್ನ ಕುಮಾರ್ ರಾವ್, ಪ್ರಧಾನ ಕಾರ್ಯದರ್ಶಿ ಎಂ.ಎಸ್. ವಿಷ್ಣು, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಕಾರ್ಯದರ್ಶಿ ಚಂದ್ರಕಾಂತ ಕೆ.ಎನ್ ಉಪಸ್ಥಿತರಿದ್ದರು. ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್ ಪ್ರಸ್ತಾವಿಸಿದರು. ಕಾರ್ಯಾಧ್ಯಕ್ಷ ರಂಜನ್ ಕಲ್ಕೂರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಉಪಾಧ್ಯ ವಂದಿಸಿದರು.ವಿದ್ವಾನ್ ಗೋಪಾಲಾಚಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net