

ಹುಬ್ಬಳ್ಳಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪವಿಧಿಗಳಿಗೆ (ಬೈಲಾ) ಸಕಾರಾತ್ಮಕ ಬದಲಾವಣೆಗಳನ್ನು ತರಲು ಅಭಿಪ್ರಾಯ ಸಂಗ್ರಹಿಸುವುದು, ಸಂಕಲ್ಪಿತ ಔನ್ಯತ್ಯಕ್ಕೆ ಕೊಂಡೊಯ್ಯುವುದು, ಆರ್ಥಿಕ ಹಿಂದುಳಿದ ಸಮಾಜ ಬಾಂಧವರಿಗೆ ಸಮಾನ ಅವಕಾಶ ಕಲ್ಪಿಸುವುದು ಸೇರಿ ವಿವಿಧ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದು, ತಮಗೆ ಬೆಂಬಲ ನೀಡಬೇಕೆಂದು ಮಹಾಸಭೆಯ ಧಾರವಾಡ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ವಕೀಲ, ವಿಶ್ವ ವಿಪ್ರ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ಚಿದಂಬರ ಕುಲಕರ್ಣಿ ಮನವಿ ಮಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 13ರಂದು ನಗರದ ಲ್ಯಾಮಿಂಗ್ಟನ್ ಹೈಸ್ಕೂಲ್ ನಲ್ಲಿ ಬೆಳಗ್ಗೆ 8ರಿಂದ ಮಹಾಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಘಟಕ ಎಸ್. ರಘುನಾಥ್ ಸ್ಪರ್ಧಿಸಿದ್ದು, ಇಬ್ಬರಿಗೂ ಸಮಾಜದವರು ಸಹಕಾರ ನೀಡಬೇಕು ಎಂದು ಕೋರಿದರು.
ಬ್ರಾಹ್ಮಣ ಸಮಾಜದ ಎಲ್ಲ ಒಳಪಂಗಡಗಳನ್ನು ಒಂದೇ ವೇದಿಕೆಗೆ ತರುವುದು, ಗಣತಿ ಮಾಡಿ ನಿಖರ ಸಂಖ್ಯೆ ನಮೂದಿಸುವುದು, ರಾಷ್ಟ್ರವ್ಯಾಪಿ ಬಲವಾದ ಸಂಟನೆ ಮಾಡುವುದು ಸೇರಿ ಹಲವು ಉದ್ದೇಶಗಳನ್ನು ಇಟ್ಟುಕೊಂಡು ಚುನಾವಣೆಗೆ ನಮ್ಮ ಪ್ಯಾನಲ್ ಸಜ್ಜುಗೊಂಡಿದೆ. ಸನಾತನ ಧರ್ಮ ರಕ್ಷಣೆ, ಹಿಂದುತ್ವಕ್ಕಾಗಿ ನಮ್ಮ ಕಾರ್ಯಕ್ರಮಗಳು ಇರಲಿವೆ. ಈ ಹಿಂದೆ ಸನಾತನ ಧರ್ಮ ಹಾಗೂ ಬ್ರಾಹ್ಮಣ ಸಮಾಜದವರ ಹಿತ ರಕ್ಷಿಸುವಲ್ಲಿ ಚುನಾಯಿತರು ವಿಲರಾಗಿದ್ದಾರೆ.
ಸಮಾಜದ ಬಡವರ ಬಗ್ಗೆ ಕಾಳಜಿ ತೋರಿಲ್ಲ. ವಿಶ್ವ ವಿಪ್ರ ಸೇವಾ ಟ್ರಸ್ಟ್ ತಂಡ ರಾಜ್ಯದಲ್ಲಿ ಸಮಾಜದ ದೂರು ದುಮ್ಮಾನ ಕೇಳಲು ಸಹಾಯವಾಣಿ ಆರಂಭಿಸಿದಾಗ ಹಾಗೂ ವಿಪ್ರರ ಮನೆಗೆ ತೆರಳಿದಾಗ ಈ ಅಂಶಗಳು ಕಂಡು ಬಂದಿವೆ. ಹಾಗಾಗಿ ಬದಲಾವಣೆಗಾಗಿ ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕು ಎಂದರು.
ರಾಷ್ಟ್ರೊತ್ಥಾನ ರಕ್ತನಿಧಿಯ ದತ್ತಮೂರ್ತಿ ಕುಲಕರ್ಣಿ, ಸಂಜೀವ ಜೋಶಿ, ಭಾಗ್ಯಶ್ರೀ ಹುದ್ದಾರ, ಶಂಕರರಾವ್ ಮಾಮಲೇದೇಶಪಾಂಡೆ, ಉಷಾ ಮಳಗಿ ಇತರರು ಗೋಷ್ಠಿಯಲ್ಲಿದ್ದರು.