ವಿಶ್ವಶಾಂತಿ ಬಯಸುವುದರಲ್ಲಿ ಭಾರತ ಪ್ರಥಮ

05 HNL 1
Published on

ಹೊನ್ನಾಳಿ: ಭಾರತ ಆಧ್ಯಾತ್ಮಿಕತೆಯ ತವರೂರು. ವಿಶ್ವಶಾಂತಿ ಬಯಸುವುದರಲ್ಲಿ ಜಗತ್ತಿನಲ್ಲಿಯೇ ಭಾರತ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತದೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಚಂದ್ರಕಲಾ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಯದಿಂದ ಪಟ್ಟಣದ ಹಿರೇಕಲ್ಮಠ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 89ನೇ ಮಹಾಶಿವರಾತ್ರಿ ಮಹೋತ್ಸವದಲ್ಲಿ ‘ಆಧುನಿಕತೆ ಜೀವನದಲ್ಲಿ ರಾಜಯೋಗದ ಅವಶ್ಯಕತೆ’ ಕುರಿತು ಉಪನ್ಯಾಸ ನೀಡಿದರು.

ಮನುಷ್ಯನಲ್ಲಿ ಆಳವಾಗಿ ಹುದುಗಿರುವ ಅಧ್ಯಾತ್ಮ ಹಾಗೂ ಧಾರ್ವಿುಕತೆ ಜಾಗೃತಿಗೊಳಿಸುವ ಅವಶ್ಯಕತೆ ಇದೆ. ಈ ಬಗ್ಗೆ ಅನೇಕ ದಾರ್ಶನಿಕರು ಜಗತ್ತಿಗೆ ಸಂದೇಶ ನೀಡಿದ್ದು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಜೀವನದ ಗುರಿ ಸಂಸ್ಕಾರ, ಸಂಸ್ಕೃತಿ ಹಾಗೂ ಸನ್ಮಾರ್ಗದ ಕಡೆಗೆ ಇರಬೇಕು. ಆಗ ದೇಶ ಕೂಡ ಸನ್ಮಾರ್ಗದಲ್ಲಿ ಮುನ್ನಡೆಯುತ್ತದೆ. ಆಧುನಿಕತೆಯ ಭರಾಟೆಯಲ್ಲಿ ತೇಲಿ ಹೋಗದೆ ಧರ್ವಚರಣೆ, ಆಧ್ಯಾತ್ಮಿಕತೆ ಕಡೆ ಹೆಚ್ಚು ಒಲವು ಹೊಂದಿದರೆ ಮಾತ್ರ ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು.

ಶಿವನ ಮುಂದೆ ಎಲ್ಲರೂ ಶ್ರೇಷ್ಠರೇ, ಹಾಗಾಗಿ ನಮ್ಮಲ್ಲಿ ಶ್ರೇಷ್ಠ ಅಥವಾ ಕನಿಷ್ಠ ಎಂಬ ಭಾವನೆ ಬೇಡ. ಮೌಲ್ಯಯುತ ಜೀವನ ನಡೆಸಿದರೆ ಬದುಕಿಗೊಂದು ಅರ್ಥ ಬರುತ್ತದೆ. ಎಲ್ಲರ ಜೀವನ ಮೌಲ್ಯಯತವಾಗಿರಲಿ ಹಾಗೂ ಶಿವನ ಧ್ಯಾನದಲ್ಲಿದ್ದರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ನಮ್ಮ ಮನಸ್ಸು ಯಾವಾಗಲೂ ಚಂಚಲತೆಯಿಂದ ಕೂಡಿರುತ್ತದೆ. ಮನಸ್ಸು ಪ್ರಫುಲ್ಲವಾಗಬೇಕಾದರೆ ನಿತ್ಯ ಧ್ಯಾನದಲ್ಲಿ ತೊಡಗಿಕೊಳ್ಳಬೇಕು. ಮೊಬೈಲ್ ಬಳಕೆ ಕಡಿಮೆಗೊಳಿಸಿ ಆಧ್ಯಾತ್ಮಿಕ ಹಾಗೂ ಧಾರ್ವಿುಕತೆಯ ಪುಸ್ತಕಗಳನ್ನು ಓದಬೇಕು ಎಂದರು.

ಬ್ರಹ್ಮಕುಮಾರಿ ಲೀಲಾಜಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಮೈಲಪ್ಪ, ಕಾಂಗ್ರೆಸ್ ಮುಖಂಡ ಎಚ್.ಎ.ಉಮಾಪತಿ ಮಾತನಾಡಿದರು. ಬ್ರಹ್ಮಕುಮಾರಿಯರಾದ ಜ್ಯೋತಿ, ಮಾಲತಿ, ಮಧುಕೇಶ್ವರಿ, ಶಾಂತಾ, ರಾಜಶ್ರೀ, ತಾರಾ, ಮಹಾದೇವಿ, ನೀಲಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net