

ಉಡುಪಿ: ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ. ಶಿವಾನಿ ಅವರಿಂದ ಅಪಾರ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ಜೋಡಿಸಿ ಎಂಬ ವಿಷಯದ ಬಗ್ಗೆ ಪ್ರೇರಣಾತ್ಮಕ ಪ್ರವಚನ ಎಂಜೆಸಿ ಮೈದಾನದಲ್ಲಿ ಫೆ.11ರ ಸಾಯಂಕಾಲ 6ರಿಂದ 8ರವರೆಗೆ ನಡೆಯಲಿದೆ ಎಂದು ಮಣಿಪಾಲ ಶಾಖೆಯ ಸಂಚಾಲಕಿ ಬಿ.ಕೆ. ಸೌರಭ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಯೋಗ ಧ್ಯಾನ ಮಾಡುವ ಸುಲಭ ವಿಧಾನವನ್ನು ಶಿವಾನಿ ವಿವರಿಸಲಿದ್ದಾರೆ. ಅವರು ಪ್ರಚಚನಗಳ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 1 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಈಗಾಗಲೇ 600ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಮೈದಾನದಲ್ಲಿ ಆಸನ ಹಾಗೂ ಪಾರ್ಕಿಂಗ್ ವ್ಯವಸ್ಥೆಯ ದೃಷ್ಟಿಯಿಂದ ಆನ್ಲೈನ್ನಲ್ಲಿ ನೋಂದಣಿ ಕಡ್ಡಾಯ ಮಾಡಿದ್ದೇವೆ. ಹೆಚ್ಚಿನ ವಿವರಗಳಿಗೆ ದೂ. ಸಂ. 9406501161 ಅಥವಾ 9986211034 ಸಂಪರ್ಕಿಸಬಹುದು ಎಂದು ಹೇಳಿದರು.
ಬ್ರಹ್ಮಾಕುಮಾರೀಸ್ ಸಂಸ್ಥೆಯು 140 ದೇಶಗಳಲ್ಲಿ 9 ಸಾವಿರಕ್ಕೂ ಅಧಿಕ ಶಾಖೆ ಹೊಂದಿದೆ. 46 ಸಾವಿರಕ್ಕೂ ಅಧಿಕ ಸಹೋದರಿಯರು, 15 ಸಾವಿರಕ್ಕೂ ಅಧಿಕ ಸಹೋದರರು ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಮಣಿಪಾಲ, ಉಡುಪಿ, ಕಾರ್ಕಳ, ಬ್ರಹ್ಮಾವರ, ಕುಂದಾಪುರ, ಬಸ್ರೂರು ಮೊದಲಾದ ಸ್ಥಳಗಳಲ್ಲಿ ಶಾಖೆಯಿದ್ದು, 500ಕ್ಕೂ ಅಧಿಕ ಸಕ್ರಿಯ ಸದಸ್ಯರಿದ್ದಾರೆ. ಜಾತಿ, ಧರ್ಮ, ಪಂಥ, ಪಂಗಡ ಭೇದವಿಲ್ಲದೆ ಶಾಂತಿಯೇ ಸಂಸ್ಥೆ ಮೂಲ ಧ್ಯೇಯವಾಗಿದೆ ಎಂದು ವಿವರಿಸಿದರು. ಮಣಿಪಾಲ, ತೀರ್ಥಹಳ್ಳಿ ಶಾಖೆ ಶಿಕ್ಷಕಿ ಬಿ.ಕೆ. ಸುಜಾತಾ ಉಪಸ್ಥಿತರಿದ್ದರು.